

ಶಿಕಾರಿಪುರ: ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬಂತೆ ಕೃಷಿಯನ್ನು, ಈ ಮಣ್ಣನ್ನು ನಂಬಿದವನು ಎಂದಿಗೂ ಹಾಳಾಗುವದಿಲ್ಲ. ಆದರೆ ಅದನ್ನು ಸಮರ್ಥವಾಗಿ ಸಕಾಲದಲ್ಲಿ ಮಾಡಬೇಕು. ಕಾಲಕಾಲಕ್ಕೆ ಮಳೆಯಾಗಬೇಕು ಎಂದು ಸುರಗಿಹಳ್ಳಿ ಶ್ರೀ ಮೂಕಪ್ಪ ಸ್ವಾಮಿ ಮಠದ ಶ್ರೀ ಮಹಂತ ಸ್ವಾಮೀಜಿ ಹೇಳಿದರು
ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ವಿದ್ಯಾರ್ಥಿಗಳು ಕೃಷಿ ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಕೃಷಿ ಮಾಹಿತಿ ಕೇಂದ್ರ ಮತ್ತು ಬೆಳೆ ಸಂಗ್ರಹಾಲಯದ ಉದ್ಘಾ ಟನೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಅಕಾಲಿಕ ಮಳೆಯಿಂದ ರೈತರು ಹೈರಾಣಾಗಿದ್ದಾರೆ. ಅತಿಯಾದ ರಸಗೊಬ್ಬರಗಳು ಮತ್ತು ಕ್ರಿಮಿನಾಶಕಗಳ ಬಳಕೆಯಿಂದ ಮಣ್ಣಿನ ಸಾರ ಕಡಿಮೆಯಾಗಿದೆ. ಸಾಂಪ್ರದಾಯಿಕ ದೇಸಿ ಪದ್ಧತಿಗಳಿಂದ ಯಾವುದೇ ರೀತಿಯ ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಹೊಲಗಳನ್ನು ಸತ್ವಯುತವನ್ನಾಗಿಸುವ ಅಗತ್ಯವಿದೆ ಎಂದರು.
ಬೆಳೆ ಸಂಗ್ರಹಾಲಯವನ್ನು ಕುಲಪತಿ ಡಾ.ಆರ್.ಸಿ.ಜಗದೀಶ್ ಉದ್ಘಾಟಿಸಿದರು. ಕೃಷಿ ಮಾಹಿತಿ ಕೇಂದ್ರವನ್ನು ಕುಲಸಚಿವ ಡಾ.ಕೆ.ಸಿ. ಶಶಿಧರ್ ಉದ್ಘಾಟಿಸಿದರು. ಎತ್ತಿನಗಾಡಿ ಮುಖಾಂತರ ಬೆಳೆ ಸಂಗ್ರಹಾಲಯಕ್ಕೆ ತೆರಳಿ ಬೆಳೆ ಸಂಗ್ರಹಾಲಯವನ್ನು ಉದ್ಘಾಟನೆಗೊಳಿಸಿದರು. ನಂತರ ಕೃಷಿ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಮುಖಂಡರು ಸೇರಿದಂತೆ ಹಲವರಿದ್ದರು.