

ಬೆಂಗಳೂರು: ಪೊಲೀಸರಿಗೆ ಹೇಳಿ ಸುಳ್ಳು ಕೇಸ್ ದಾಖಲಿಸಿರುವುದಾಗಿ ಬೆದರಿಸಿ 10 ಸಾವಿರ ರೂ. ಸುಲಿಗೆ ಮಾಡಿದ ಹಿನ್ನೆಲೆಯಲ್ಲಿ ಸ್ನೇಹಿತನ ಕತ್ತು ಕೊಯ್ದು ಹತ್ಯೆ ಮಾಡಿದ ಬಳಿಕ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಮೂವರು ಸ್ನೇಹಿತರು ಶರಣಾಗಿದ್ದಾರೆ.
ಹೆಗಡೆನಗರ ನಿವಾಸಿ ಫಾರೂಕ್ ಖಾನ್ (24) ಮೃತ ವ್ಯಕ್ತಿ. ಈ ಸಂಬಂಧ ಗರುಡಾಚಾರ್‌ಪಾಳ್ಯದ ಸುಹೇಲ್ ಖಾನ್, ಹೆಗಡೆನಗರದ ಮುಬಾರಕ್ ಮತ್ತು ಬಿಲ್ವಾರದಹಳ್ಳಿಯ ಅಲಿ ಅಕ್ರಂ ಎಂಬುವರನ್ನು ಬಂಧಿಸಲಾಗಿದೆ. ಸಂಪಿಗೆಹಳ್ಳಿಯ ಅರ್ಕಾವತಿ ಬಡಾವಣೆಯಿಂದ ಭಾನುವಾರ ಮಧ್ಯಾಹ್ನ 2 ಗಂಟೆಗೆ ಫಾರೂಕ್‌ನನ್ನು ಸ್ನೇಹಿತರು ಆಟೋದಲ್ಲಿ ಅಪಹರಿಸಿದ್ದರು. ಬಳಿಕ ಚಾಕುವಿನಿಂದ ಕುತ್ತಿಗೆ ಇರಿದು ಕೊಲೆ ಮಾಡಿ ರಸ್ತೆಬದಿ ಶವ ಎಸೆದಿದ್ದಾರೆ. ಮೃತನ ಸೋದರ ಶಬ್ಬೀರ್ ಅಹಮದ್ ದೂರು ನೀಡಿದ್ದರು. ಅಷ್ಟರಲ್ಲಿ ಠಾಣೆಗೆ ತೆರಳಿ ಆರೋಪಿಗಳು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫಾರೂಕ್ ಮತ್ತು ಆರೋಪಿಗಳು ಬಾಲ್ಯ ಸ್ನೇಹಿತರು. ವೆಲ್ಡಿಂಗ್ ಮತ್ತು ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದೆ ಸುಹೇಲ್ ಖಾನ್‌ಗೆ ನೀನು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದೀಯಾ. ಪೊಲೀಸರಿಗೆ ಹೇಳಿ ಕೇಸ್ ಹಾಕಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿ 10 ಸಾವಿರ ರೂ.ಗಳನ್ನು ಫಾರೂಕ್ ಖಾನ್ ಮತ್ತು ಆತನ ಸ್ನೇಹಿತ ಸದ್ದಾಂ ಸುಲಿಗೆ ಮಾಡಿದ್ದರು. ಮೊಬೈಲ್ ಕಸಿದುಕೊಂಡು ಫಾರೂಕ್ ಒಡೆದು ಹಾಕಿದ್ದ. ಇದಕ್ಕೆ ಪ್ರತೀಕಾರ ತೀರಿಸಲು ಸುಹೇಲ್ ನಿರ್ಧರಿಸಿದ್ದ. ಮುಬಾರಕ್ ಮತ್ತು ಅಕ್ರಂ ಸಾಥ್ ಕೊಟ್ಟಿದ್ದಾರೆ.
ಭಾನುವಾರ ಅರ್ಕಾವತಿ ಬಡಾವಣೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಫಾರೂಕ್‌ನನ್ನು ಮಾತನಾಡುವ ನೆಪದಲ್ಲಿ ಆರೋಪಿಗಳು ಕರೆಸಿದ್ದರು. ಅಲ್ಲಿಗೆ ಬಂದ ಫಾರೂಕ್‌ನನ್ನು ಸುಹೇಲ್ ತಂಡವು ಆಟೋಗೆ ಹತ್ತಿಸಿಕೊಂಡು ಚಾಕುವಿನಿಂದ ಇರಿದು ಹತ್ಯೆ ಬಳಿಕ ಚರಂಡಿಗೆ ಶವ ಎಸೆದು ತೆರಳಿದ್ದರು. ‘ಫಾರೂಕ್‌ಗೆ ವಾರ್ನಿಂಗ್ ಕೊಡಲು ಕರೆಸಿದ್ದೆವು. ಪ್ರತಿರೋಧ ತೋರಿದಾಗ ಎರಡು ಬಾರಿ ಚಾಕುವಿನಿಂದ ಇರಿದೆವು. ಹೀಗೆ ಬಿಟ್ಟರೆ ಕೊಲೆ ಯತ್ನ ಪ್ರಕರಣ ದಾಖಲಾಗುತ್ತದೆ ಎಂದು ಹೆದರಿ ಕೊಲೆ ಮಾಡಿದೆವು’ ಎಂದು ಆರೋಪಿ ಸುಹೇಲ್ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ.