ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ

Crime Logo
Published on

ಬೆಂಗಳೂರು: ಪಾನಮತ್ತರಾಗಿ ರೀಲ್ಸ್ ಮಾಡಲು ಮಾರತಹಳ್ಳಿ ಸಮೀಪದ ಪಣತ್ತೂರು ಕೆರೆಗೆ ಇಳಿದಿದ್ದ ಇಬ್ಬರು ಯುವಕರ ಪೈಕಿ ಒಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ನೇಪಾಳ ಮೂಲದ ಅನಿಲ್ (೨೨) ಮೃತಪಟ್ಟ ಯುವಕ. ಆತನ ಜತೆ ಕೆರೆಗೆ ಜಿಗಿದಿದ್ದ ದಿನೇಶ್ ಎಂಬ ಯುವಕ ಈಜಿ ಸುರಕ್ಷಿತವಾಗಿ ದಡ ಸೇರಿದ್ದಾನೆ.
ಅನಿಲ್ ಮತ್ತು ದಿನೇಶ್, ಸ್ನೇಹಿತ ಉಪೇಂದ್ರ ಜತೆ ಮದ್ಯಪಾನ ಮಾಡಿ ಪಣತ್ತೂರು ಕೆರೆ ಬಳಿ ಹೋಗಿದ್ದರು. ಈ ಪೈಕಿ ಅನಿಲ್ ಮತ್ತು ದಿನೇಶ್, ಮದ್ಯದ ನಶೆಯಲ್ಲಿ ರೀಲ್ಸ್ ಮಾಡಲು ಕೆರೆಗೆ ಜಿಗಿದಿದ್ದಾರೆ. ಉಪೇಂದ್ರ, ದಡದಲ್ಲಿ ಕುಳಿತು ಮೊಬೈಲ್‌ನಿಂದ ಆ ಇಬ್ಬರ ರೀಲ್ಸ್‌ನ ದೃಶ್ಯ ಚಿತ್ರೀಕರಿಸಿಕೊಳ್ಳುತ್ತಿದ್ದ. ಆಗ ಅನಿಲ್, ನೀರಿನಲ್ಲಿ ಮುಳುಗಿದ್ದಾನೆ. ಇದರಿಂದ ಗಾಬರಿಯಾದ ದಿನೇಶ್, ಈಜಿ ದಡಕ್ಕೆ ಬಂದಿದ್ದಾನೆ. ನಂತರ ದಿನೇಶ್ ಮತ್ತು ಉಪೇಂದ್ರ, ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾರೆ. ತುರ್ತು ಕರೆ ಆಧರಿಸಿ ಸ್ಥಳಕ್ಕೆ ಹೋಗುವಷ್ಟರಲ್ಲಿ ಅನಿಲ್ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಿಲ್, ದಿನೇಶ್ ಮತ್ತು ಉಪೇಂದ್ರ, ಪಣತ್ತೂರಿನ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು. ಅನಿಲ್ ಮತ್ತು ದಿನೇಶ್, ಪಣತ್ತೂರಿನ ಅಪಾರ್ಟ್‌ಮೆಂಟ್‌ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಉಪೇಂದ್ರ, ಅದೇ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದಾನೆ.
ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯು ಅನಿಲ್‌ನ ಶವ ಪತ್ತೆಗಾಗಿ ಬೋಟ್‌ಗಳ ಮೂಲಕ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ ಆದರೆ, ಶವ ಪತ್ತೆಯಾಗದ ಕಾರಣ ತಡರಾತ್ರಿ ಶೋಧ ಕಾರ್ಯ ಸ್ಥಗಿತಗೊಳಿಸಲಾಯಿತು. ಶವ ಪತ್ತೆಗೆ ಸೋಮವಾರ ಮತ್ತೆ ಶೋಧ ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಮಾರತ್‌ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net