

ಮಳವಳ್ಳಿ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರೂ ಆಗಿರುವ ತಹಸೀಲ್ದಾರ್ ಡಾ.ವಿ.ಎಸ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಇದಕ್ಕೂ ಮುನ್ನ ತಾಲೂಕು ಪಂಚಾಯಿತಿ ಬಳಿಯಿಂದ ಬೆಳ್ಳಿ ಸಾರೋಟಿನಲ್ಲಿ ಇರಿಸಲಾಗಿದ್ದ ಕೆಂಪೇಗೌಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮೆರವಣಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇಂದು ವಿಶ್ವವೇ ನಾಡಿನ ರಾಜಧಾನಿ ಬೆಂಗಳೂರು ನೋಡುವಂತೆ ಮಾಡಿರುವ ನಗರವನ್ನು ಅಭಿವೃದ್ಧಿ ಪಡಿಸಲು ಪೂರ್ವಯೋಜನೆ ರೂಪಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.
ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳೊಡನೆ ಮೆರವಣಿಗೆ ನಡೆಸುವ ಮೂಲಕ ಅಂಬೇಡ್ಕರ್ ಭವನದ ವೇದಿಕೆ ಬಳಿಗೆ ಬರಲಾಯಿತು. ವೇದಿಕೆ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಉದ್ಘಾಟಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಪಿ.ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ತಾಪಂ ಇಒ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ, ಪುರಸಭೆ ಸದಸ್ಯ ಆರ್.ಎನ್.ವಿಶ್ವಾಸ್, ಶಿವಮಾದೇಗೌಡ, ದ್ಯಾಪೇಗೌಡ ಸೇರಿದಂತೆ ಇತರರಿದ್ದರು.