

ನಂಜನಗೂಡು: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನ ರಚನೆಯ ಜತೆಗೆ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞರಾಗಿ ಹಾಗೂ ಸಮಾಜ ಸುಧಾರಕರಾಗಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ ಎಂದು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದರು.
ತಾಲೂಕಿನ ತುಮ್ಮನೇರಳೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದಿಂದ ಗುರುವಾರ ಆಯೋಜಿಸಿದ್ದ ಮಹಾಪರಿನಿರ್ವಾಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರೃ ಬಂದ ನಂತರ ದೇಶಕ್ಕೆ ಬಲಿಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡುವ ಜೊತೆಗೆ ದೀನ ದಲಿತರು, ಬಡವರು, ಹಿಂದುಳಿದವರು, ಮಹಿಳೆಯರೂ ಸೇರಿದಂತೆ ಎಲ್ಲರಿಗೂ ಸಮಾನತೆಯ ಅವಕಾಶ ಲಭ್ಯವಾಗುವಂತೆ ಹೋರಾಟ ನಡೆಸಿದರು. ಭಾರತ ದೇಶದಲ್ಲಿ ಎಲ್ಲ ಶೋಷಿತರೂ, ದಲಿತರು, ಹಿಂದುಳಿದವರೂ, ಸ್ವತಂತ್ರವಾಗಿ ಸ್ವಾಭಿಮಾನದಿಂದ ನಮ್ಮ ಹಕ್ಕುಗಳನ್ನೆಲ್ಲಾ ಪಡೆದುಕೊಂಡು ಬದುಕಲು ಸಾಧ್ಯವಾಗಿದ್ದು ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ. ಹೀಗಾಗಿ ಸಂವಿಧಾನ ಉಳಿದರಷ್ಟೇ ನಮ್ಮ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದು ತಿಳಿಸಿದರು.
ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಹಾಡ್ಯ ರಂಗಸ್ವಾಮಿ, ಮರಡಿಹುಂಡಿ ಬುಲೆಟ್ ಮಹದೇವು, ನಂದೀಶ್, ಪಿ.ನಾಗೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.