ಜಾಮೀನು ಕೊಡಿಸಿ ಕಳ್ಳತನಕ್ಕೆ ದೂಡಿದರು

Crime Logo
Published on

ಬೆಂಗಳೂರು: ಸಹಚರನಿಗೆ ಜಾಮೀನು ಕೊಡಿಸಿ ಹೊರ ಕರೆತಂದು ಕಳ್ಳತನ ಮಾಡಿಸುತ್ತಿದ್ದ ರೌಡಿ ದಂಪತಿ ಹಾಗೂ ಆತನ ಸಹಚರರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

ಬಸವೇಶ್ವರನಗರದ ರೌಡಿ ಗೌತಮ್ ಶೆಟ್ಟಿ, ಆತನ ಪತ್ನಿ ಶಿಬಾ ಅಲಿಯಾಸ್ ಚಂದನ ಮತ್ತು ಸಹಚರರಾದ ಆಂದ್ರಹಳ್ಳಿಯ ಮಾಣಿಕ್ಯ ಅಲಿಯಾಸ್ ಮಣಿಕಾಂತ್, ನರಸಿಂಹ ನಾಯಕ್ ಹಾಗೂ ದಯಾನಂದ್ ಬಂಧಿತರು. 325 ಗ್ರಾಂ ಚಿನ್ನಾಭರಣ,1.8 ಕೆಜಿ ಬೆಳ್ಳಿ ವಸ್ತುಗಳು ಸೇರಿ 21 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಮಿನಲ್‌ಗಳಾದ ಗೌತಮ್ ಮತ್ತು ಮಾಣಿಕ್ಯ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿನ್ನಲೆಯಲ್ಲಿ ಗೌತಮ್ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ರೌಡಿಪಟ್ಟಿ ಸಹ ತೆರೆಯಲಾಗಿದೆ. 6 ವರ್ಷಗಳ ಹಿಂದೆ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಆಗ ಮನೆಗಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಣಿಕ್ಯನ ಪರಿಚಯವಾಗಿತ್ತು.

ಜೈಲಿನಲ್ಲಿ ಜಾಮೀನು ಪಡೆಯಲು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದ ವಿಚಾರಣಾಧೀನ ಕೈದಿಗಳಿಗೆ ಗೌತಮ್ ಗಾಳ ಹಾಕಿದ್ದ. ಆಗಲೇ ಆತನಿಗೆ ಮಾಣಿಕ್ಯ ಸಿಕ್ಕಿದ್ದಾನೆ. ತರುವಾಯ ಗೌತಮ್‌ಗೆ ಮಾಣಿಕ್ಯನ ಮೂಲಕ ನರಸಿಂಹ ಹಾಗೂ ದಯಾನಂದ್ ಸಂಪರ್ಕಕ್ಕೆ ಬಂದಿದ್ದಾರೆ. ಜೈಲಿನಲ್ಲಿದ್ದ ಮಾಣಿಕ್ಯನಿಗೆ ಜಾಮೀನು ಕೊಡಿಸಿ ಹೊರತಂದ ಗೌತಮ್ ದಂಪತಿ, ಆತನ ಮುಖೇನ ನಗರದಲ್ಲಿ ಮನೆಗಳ್ಳತನ ಕೃತ್ಯಕ್ಕೆ ಕೈ ಹಾಕಿದ್ದರು. ಕದ್ದ ಚಿನ್ನಾಭರಣ ಗೌತಮ್ ಪತ್ನಿ ಶಿಬಾ ಮೂಲಕ ವಿಲೇವಾರಿ ಮಾಡಿಸುತ್ತಿದ್ದ.

ಎಚ್‌ಎಂಟಿ ಲೇಔಟ್‌ನಲ್ಲಿ ಶಿಬಾ ಗುರುತಿಸಿದ್ದ ಮನೆಗಳ ಬೀಗ ಮುರಿದು ಮಾಣಿಕ್ಯ ಕಳ್ಳತನ ಮಾಡಿದ್ದ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಬೆರಳಚ್ಚು ಪತ್ತೆಯಾಗಿತ್ತು. ಆದರೆ, ಆರೋಪಿಗಳು ಒಂದೆಡೆ ವಾಸ ಮಾಡುತ್ತಿರಲಿಲ್ಲ. ಕೆಲವು ದಿನಗಳಿಂದ ಆಂದ್ರಹಳ್ಳಿಯಲ್ಲಿ ಬಾಡಿಗೆ ರೂಮ್ನಲ್ಲಿ ಇದ್ದರು. ಈ ಬಗ್ಗೆ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಎಂ.ಎಸ್.ಅನಿಲ್‌ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net