ಸಚಿವರನ್ನೇ ಹೆದರಿಸಿದ್ದ ಎಚ್‌ಡಿಕೆ; ಸಿದ್ದರಾಮಯ್ಯ ಗುರುತರ ಆರೋಪ

Siddaramaiah HD Kumaraswamy
Published on

ಬೆಂಗಳೂರು: ಜಾತಿ ಗಣತಿ ವಿಚಾರದಲ್ಲಿ ರಾಜಕೀಯ ಮಾತಿನ ಚಕಮಕಿ ಮುಂದುವರಿದ್ದು, ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ವರದಿ ಬಗ್ಗೆ ಸಿದ್ದರಾಮಯ್ಯ ತುಟಿಕ್‌ಪಿಟಕ್ ಅನ್ನಲಿಲ್ಲ ಎಂಬ ಕುಮಾರಸ್ವಾಮಿ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಈ ವಿಚಾರವನ್ನು ಪುಟ್ಟರಂಗ ಶೆಟ್ಟಿ ಅವರಲ್ಲಿ ಕೇಳಿದರೆ ಗೊತ್ತಾಗುತ್ತದೆ. ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗಶೆಟ್ಟಿಯವರು ವರದಿ ಸ್ವೀಕರಿಸಲು ಸಭೆಯನ್ನು ಆಯೋಜಿಸಿದ್ದರು. ಆದರೆ, ಸಿಎಂ ಆಗಿದ್ದ ಕುಮಾರಸ್ವಾಮಿಯವರು ಸಚಿವರನ್ನು ಹೆದರಿಸಿ ಸಭೆಯನ್ನೇ ರದ್ದು ಮಾಡಿದರು ಎಂದು ಗಂಭೀರ ಆರೋಪ ಮಾಡಿದರು.

ಇನ್ನು ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡುತ್ತಿರುವ ಎಚ್‌ಡಿಕೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಮುಖ್ಯಮಂತ್ರಿ ಆಗುತ್ತೇನೆ, ಮೈತ್ರಿ ಸರ್ಕಾರ ಬರುತ್ತದೆ ಎಂಬ ಕುಮಾರಸ್ವಾಮಿ ಭ್ರಮೆಲ್ಲಿದ್ದರು. ಆದರೆ ಜನ ಬೇರೆಯದೇ ತೀರ್ಪುಕೊಟ್ಟರು. ಈಗ ಅಧಿಕಾರವಿಲ್ಲದೇ ಚಡಪಡಿಸುತ್ತಿದ್ದಾರೆ. ಅದಕ್ಕಾಗಿ ಏನೇನೋ ಬಾಯಿಗೆ ಬಂದಂತೆ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಪಟಾಕಿ ದುರಂತದಲ್ಲಿ ಮೃತರಾದ ಕುಟುಂಬಕ್ಕೆ ನೀಡುತ್ತಿರುವ ಪರಿಹಾರದ ಕುರಿತು ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಹೇಳಿದಂತೆ ಪರಿಹಾರ ಕೊಡಲು ಆಗುತ್ತಾ. ನಮ್ಮ ವಿವೇಚನೆಯಂತೆ ಕೊಟ್ಟಿದ್ದೇವೆ. ಅವರ ಹೇಳಿದಂತೆ ಕೇಳಬೇಕಾ? ನಾವೀಗ ಐದು ಲಕ್ಷ ಕೊಟ್ಟಿದ್ದೇವೆ, ಆಸ್ಪತ್ರೆ ವೆಚ್ಚ ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net