ನನ್ನ ಪ್ರಶ್ನೆಗೆ ಮೊದಲು ಉತ್ತರಿಸಿ; ಕುಮಾರಸ್ವಾಮಿಗೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಸವಾಲು

krishnabyregowda
Published on

ಬೆಂಗಳೂರು:
ಸತ್ತವರ ಹೆಸರಿಗೆ ಡಿನೋಟಿಫೈ ಮಾಡುವುದು ಅಪರಾಧ ಅಲ್ಲವೇ? ಎಂದು ನಾನು ಕೇಳಿದ್ದ ಪ್ರಶ್ನೆಗೆ ಕುಮಾರಸ್ವಾಮಿ ಅವರು ಉತ್ತರಿಸಲಿ ಎಂದು ಕೇಳಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ,
ಅವರಂತೆ ವಯಕ್ತಿಕ ದಾಳಿ ನಡೆಸುವುದು, ನಿಂದಿಸುವುದು ನಮ್ಮ ಸಂಸ್ಕೃತಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಹೆಬ್ಬಟ್ಟು, ಾರಿನ್‌ನವ, ಸತ್ಯ ಹರಿಶ್ಚಂದ್ರ ಎಂದೆಲ್ಲ ಟೀಕಿಸಿದ್ದಾರೆ. ಯಾರು ಯಾರನ್ನೇ ನಿಂದಿಸಿದರೂ ಸತ್ಯ ಏನು ಎಂಬುದು ಜನರಿಗೆ ತಿಳಿದಿದೆ ಎಂದರು.
ಗಂಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಜಮೀನನ್ನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಡಿ ನೋಟಿಫಿಕೇಷನ್ ಮಾಡಲು ಮುಂದಾಗಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅದೇ ಜಮೀನನ್ನು ಸತ್ತವರ ಹೆಸರಿಗೆ ಡಿನೋಟಿಫೈ ಮಾಡಲಾಗಿತ್ತು. ಕೊನೆಗೆ ಈ ಜಮೀನು ಕುಮಾರಸ್ವಾಮಿ ಅವರ ಬಾಮೈದನ ಹೆಸರಿಗೆ ನೋಂದಣಿಯಾಗಿತ್ತು ಎಂದರು.
ರಾಜಕಾರಣದಲ್ಲಿ ವ್ಯಯಕ್ತಿಕ ದಾಳಿ ನಡೆಸುವುದು ನಿಂದಿಸುವುದು ಕುಮಾರಸ್ವಾಮಿಯವರಿಗೆ ಸಾಮಾನ್ಯ ಸಂಗತಿಯಾಗಿದೆ. ಆದರೆ, ನಮ್ಮದು ಅಂತಹ ಸಂಸ್ಕೃತಿಯಲ್ಲ. ನಾವು ಅಂತಹ ಸಂಸ್ಕೃತಿಗೆ ಎಂದಿಗೂ ಜೋತು ಬೀಳುವುದಿಲ್ಲ. ಅಲ್ಲದೆ, ಇಂತಹ ನಿಂದನೆಗಳು ವಯುಕ್ತಿಕ ದಾಳಿಗಳಿಗೆ ನಾವು ಬಗ್ಗುವವರೂ ಅಲ್ಲ ಎಂದರು.
ಈಗಲೂ ನಾನು ಅದೇ ಪ್ರಶ್ನೆಯನ್ನು ಮುಂದಿಡುತ್ತೇನೆ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಈ ಜಮೀನಿನ ಡಿನೋಟಿಫೈ ಗೆ ಅತ್ಯುತ್ಸಾಹ ತೋರಿದ್ದು ಏಕೆ? ಇವರ ಅತ್ತೆ ಈ ಭೂಮಿಯನ್ನು ತಮ್ಮ ಹೆಸರಿಗೆ ಜಿಪಿಎ ಮಾಡಿಸಿಕೊಂಡದ್ದು ಸುಳ್ಳೇ? ಅಂತಿಮವಾಗಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಸಹೋದರನ ಹೆಸರಿಗೆ ಈ ಜಮೀನು ನೋಂದಣಿಯಾಗಿಲ್ಲವೇ? ಇದು ಅಧಿಕಾರದ ದುರ್ಬಳಕೆ ಅಲ್ಲವೇ? ಈ ಬಗ್ಗೆ ಕುಮಾರಸ್ವಾಮಿಯವರ ಸ್ಪಷ್ಟನೆ ನೀಡಲಿ ಸಾಕು ಎಂದು ಸವಾಲು ಹಾಕಿದರು.

ರಾಜಭವನ ದುರ್ಬಳಕೆ
ರಾಜಭವನವನ್ನು ಬಿಜೆಪಿ ಮತ್ತು ಜೆಡಿಎಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಂವಿಧಾನಿಕ ಹುದ್ದೆಯಲ್ಲಿರುವವರು ಪಕ್ಷಪಾತಿಯಾಗಿ ನಡೆದುಕೊಂಡರೆ ಹೇಗೆ ಸಹಿಸಿಕೊಳ್ಳಲು ಸಾಧ್ಯ? ರಾಷ್ಟ್ರಪತಿಗೆ ದೂರು ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನೂ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದರು.

ರಾಜಭವನ ಮಾಹಿತಿ ಸೋರಿಕೆಯಾದರೆ ನಾವೇನು ಮಾಡಲು ಆಗುತ್ತೆ? ಪೊಲೀಸ್ ತನಿಖೆ ನಡೆಸಬೇಕೇನು? ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net