ಸ್ವತಂತ್ರವಾಗಿ JDS ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ, ದಲಿತರು-ಮಹಿಳೆಗೆ ಡಿಸಿಎಂ ಪಟ್ಟ: HDK ಘೋಷಣೆ

hdk 1
Published on

ಬೆಂಗಳೂರು: ದಲಿತರನ್ನು ಸಿಎಂ ಮಾಡುವ ವಿಚಾರ ಕುರಿತು ಕಾಂಗ್ರೆಸ್​ ಮತ್ತು ಬಿಜೆಪಿ ಮಧ್ಯೆ ಮಾತಿನ ಜಟಾಪಟಿ ನಡೆಯುತ್ತಿರುವಾಗಲೇ ದಲಿತ ಹಾಗೂ ಮಹಿಳಾ ಪ್ರತಿನಿಧಿಗಳಿಗೆ ಡಿಸಿಎಂ ಪಟ್ಟ ನೀಡುವುದಾಗಿ ಎಚ್​ಡಿಕೆ ವಾಗ್ದಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಅಲ್ಪಸಂಖ್ಯಾತರನ್ನು ಸಿಎಂ ಮಾಡಲೂ ನಮ್ಮ ಪಕ್ಷದಲ್ಲಿ ಮುಕ್ತ ಅವಕಾಶವಿದೆ ಎನ್ನುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಚೆಕ್​ಮೆಟ್​ ಕೊಟ್ಟಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್​ನ ಪಂಚರತ್ನ ರಥಯಾತ್ರೆ ನಡೆಯುತ್ತಿದ್ದು, ಮಂಗಳವಾರ ಕೋಲಾರ ತಾಲೂಕಿನ ಕ್ಯಾಲನೂರಿನಲ್ಲಿ ಮಾತನಾಡಿದ ಎಚ್​ಡಿಕೆ, 'ಕುಮಾರಸ್ವಾಮಿ ದೆಹಲಿಗೆ ಹೋದರೆ ತಾವೇ ಸಿಎಂ ಆಗಬಹುದೆಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಈ ರೀತಿ ಚರ್ಚೆಗೆ ಅವಕಾಶ ಇರುವುದು ಜೆಡಿಎಸ್​ನಲ್ಲಿ ಮಾತ್ರ. ಮುಸ್ಲಿಮರೂ ನಮ್ಮವರೇ. ಅವರೂ ಕನ್ನಡಿಗರೇ, ಆ ಸಮುದಾಯದವರನ್ನು ಸಿಎಂ ಮಾಡಬಾರದು ಎಂದೇನೂ ಇಲ್ಲ. ಒಬ್ಬ ವ್ಯಕ್ತಿಗೆ ಅವಕಾಶ ನೀಡುವ ಪ್ರಶ್ನೆ ಇದಲ್ಲ, ಆ ಸಮುದಾಯಗಳಲ್ಲಿನ ಸಮಸ್ಯೆಗೆ ಪರಿಹಾರ ನೀಡಬೇಕು ಎಂದರು.

ದಲಿತ ಸಮುದಾಯದ ಯುವಕನೊಬ್ಬ ತಾನು ಎದುರಿಸುತ್ತಿರುವ ಸಮಸ್ಯೆಯನ್ನು ಹೇಳಿಕೊಂಡು. ಎಲ್ಲ ರಾಜಕೀಯ ಪಕ್ಷಗಳೂ ದಲಿತರನ್ನು ಅಸಡ್ಡೆಯಿಂದ ನೋಡುತ್ತಿರುವುದಾಗಿ ಬೇಸರ ಹೊರಹಾಕಿದ. ದಲಿತರು ಹಾಗೂ ಮಹಿಳೆಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಜೆಡಿಎಸ್​ ಸಿದ್ಧವಿದೆ. ದಲಿತರ ಮತ ಪಡೆಯಲು ನಾನು ಈ ಘೋಷಣೆ ಮಾಡುತ್ತಿಲ್ಲ ಎಂದು ಎಚ್​ಡಿಕೆ ಸ್ಪಷ್ಟಪಡಿಸಿದರು.

ಕಾಂಗ್ರೆಸ್​ ಭಾರತ್​ ಜೋಡೋ, ಬಿಜೆಪಿ ಸಂಕಲ್ಪ ಯಾತ್ರೆ ಮೂಲಕ ರಾಜ್ಯದ ಜನರನ್ನು ತಲುಪುವ ಯತ್ನ ಮಾಡಿದ್ದರೆ ಇತ್ತ ಜೆಡಿಎಸ್​ ಪಂಚರತ್ನ ರಥಯಾತ್ರೆ ಆರಂಭಿಸಿದೆ. ಈ ನಡುವೆ ಜೆಡಿಎಸ್​ ಸದ್ದುಗದ್ದಲವಿಲ್ಲದೆ, ಪ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆಗಳನ್ನು ಜನರ ಮನೆಗೆ ತಲುಪಿಸಲು ಹಾಗೂ ಚುನಾವಣಾ ಪ್ರಣಾಳಿಕೆಯ ಭಾಗಗಳಾಗಿರುವ ಪಂಚರತ್ನ ಕಾರ್ಯಕ್ರಮಗಳನ್ನು ಪ್ರಚುರಪಡಿಸುವ ಮೂಲಕ ಮತದಾರರ ಮನಗೆಲ್ಲಲು ಕಾರ್ಯತಂತ್ರ ರೂಪಿಸಿದೆ. ಇದೀಗ ಜೆಡಿಎಸ್​ ಉರುಳಿಸಿರುವ ಹೊಸ ದಾಳದಿಂದ ಕೆಲವಂದಿಷ್ಟು ದಲಿತ, ಅಲ್ಪಸಂಖ್ಯಾತ ಮತ್ತು ಮಹಿಳಾ ಮತಗಳು ಕೈತಪ್ಪಬಹುದೆಂಬ ತಳಮಳ ಕಾಂಗ್ರೆಸ್​ನಲ್ಲಿ ಸೃಷ್ಟಿಯಾಗಿದೆ.

ಮೂಲಸೌಕರ್ಯ, ಗುಣಮಟ್ಟಕ್ಕೆ ಒತ್ತು: ಇದುವರೆಗೆ ಮಾಜಿ ಸಿಎಂ ಕುಮಾರಸ್ವಾಮಿ, ಮಾತು ಮಾತಿಗೂ ಕಾಂಗ್ರೆಸ್​ ವಿರುದ್ಧ ಹರಿಹಾಯುತ್ತಿದ್ದರು. ಬಳಿಕ ಬಿಜೆಪಿ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡರು. ಈಗ ನಾನು ಯಾರನ್ನೂ ದೂಷಿಸುವುದಿಲ್ಲ, ಆರೋಪ ಮಾಡುವುದಿಲ್ಲ. ಅದರಿಂದ ನನಗಾಗಲಿ, ಜನರಿಗಾಗಲಿ ಏನೂ ಪ್ರಯೋಜನವಿಲ್ಲ. ನನ್ನ ಪಾಡಿಗೆ ನಾನು ಪದ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಮತ ಕೇಳುತ್ತೇನೆ ಎಂದು ಹೊರಟಿದ್ದಾರೆ. ಜನಪ್ರಿಯ ಕಾರ್ಯಕ್ರಮಗಳಿಗಿಂತ ಮೂಲಸೌಕರ್ಯಕ್ಕೆ ಒತ್ತು ನೀಡುವ, ಗುಣಮಟ್ಟದ ಜೀವನಕ್ಕೆ ಆಧಾರಸ್ಥಂಭವಾಗುವ ಯೋಜನೆಗಳನ್ನು ರೂಪಿಸಿ ಪಂಚರತ್ನ ರಥಯಾತ್ರೆ ಮೂಲಕ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಪಂಚರತ್ನ ಕಾರ್ಯಕ್ರಮಗಳಿಗೆ ಆದ್ಯತೆ

ಪಿಯುವರೆಗೆ ಉಚಿತ ಶಿಕ್ಷಣ ಉಚಿತ, ಗುಣಮಟ್ಟದ ವೈದ್ಯಕೀಯ ಸೇವೆ, ನೀರಾವರಿ ಯೋಜನೆಗಳು, ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ನೀಡುವ ಭರವಸೆಗಳನ್ನು ಎಚ್​ಡಿಕೆ ನೀಡುತ್ತಿದ್ದಾರೆ. ಅದಕ್ಕೆ ಜತೆಯಾಗಿ ತಮ್ಮ ಸರ್ಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸ್ವ-ಸಹಾಯ ಮಹಿಳಾ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಎಚ್​ಡಿಕೆ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net