

ಬೆಂಗಳೂರು: ಜನಪ್ರಿಯ ಯೋಜನೆಗಳನ್ನು ಜಾರಿ ಮಾಡುವಾಗ ಸಮಸ್ಯೆ ಅರಿತು ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ, ಜನರ ತೆರಿಗೆ ಹಣ ವ್ಯರ್ಥವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ಬೆಲೆ ಏರಿಕೆ ವಿಚಾರದ ಮೇಲಿನ ಚರ್ಚೆಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಎಚ್ಡಿಕೆ, ಸರ್ಕಾರದಲ್ಲಿ ತಮಗಾಗಿದ್ದ ಕಹಿಘಟನೆಗಳನ್ನು ನೆನೆದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ತಮ್ಮ ಸರ್ಕಾರದ ಕೊನೆಯಲ್ಲಿ ಚುನಾವಣೆಗೆ ಹೋಗುವ ಮುನ್ನ ಪಡಿತರ ಅಕ್ಕಿಯನ್ನು ಏಳು ಕೆಜಿ ಕೊಡುವುದಾಗಿ ಸಿದ್ದರಾಮಯ್ಯ ಘೊಷಿಸಿದ್ದರು, ಆದರೆ ಅವರು 5 ಕೆಜಿ ವಿತರಣೆಗಾಗುವಂತೆ ಹಣ ಮೀಸಲಿಟ್ಟಿದ್ದರು. ನಾನು ಸಿಎಂ ಆದಾಗ, ‘ನಾವು ಏಳು ಕೆಜಿ ಭರವಸೆ ಕೊಟ್ಟಿದ್ದೇವೆ, ನೀವು ಕೊಡಬೇಕೆಂದು’ ಪಟ್ಟು ಹಿಡಿದಿದ್ದರು. ಉಳಿದ ಎರಡು ಕೆಜಿಗೆ ಬೇಕಾದ ಹಣ ಹೊಂದಿಸಬೇಕಾಯಿತು, ಇದು ಸತ್ಯಾಂಶ ಎಂದು ನೆನಪಿಸಿಕೊಂಡರು.
ಸಿದ್ದರಾಮಯ್ಯ ಚುನಾವಣೆಗೆ ಹೋಗುವ ಮುನ್ನ 15 ಲಕ್ಷ ಮನೆ ಒಮ್ಮೆಲೆ ಘೊಷಣೆ ಮಾಡಿದರು, ಆದರೆ 2900 ಕೋಟಿ ರೂ. ಮಾತ್ರ ಮೀಸಲಿಟ್ಟರು. ಅಷ್ಟು ಮನೆ ಕಟ್ಟಲು 29 ಸಾವಿರ ಕೋಟಿ ರೂ. ಬೇಕಿತ್ತು. ನಾನು ಅಧಿಕಾರಕ್ಕೆ ಬಂದಾಗ ಅಷ್ಟು ಹಣ ಎಲ್ಲಿಂದ ತರಲು ಸಾಧ್ಯ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯನವರ ಆ ಒಂದು ತೀರ್ವನದಿಂದ ಕಳೆದ ಮೂರು ವರ್ಷದಿಂದ ಹೊಸದಾಗಿ ಒಂದೇ ಒಂದು ಮನೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿ ಮಾಡಿದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಮಾಡುತ್ತೇವೆಂದು ಸಿಲಿಂಡರ್ ಜತೆ ಸ್ಟೌವ್ ವಿತರಿಸಲು ಒಂದು ಲಕ್ಷ ಸೌವ್ ಖರೀದಿಸಿದರು. ನಾನು ಸಿಎಂ ಆದಾಗ, ಆ ಒಂದು ಲಕ್ಷ ಸ್ಟೌವ್ ಗೋದಾಮಿನಲ್ಲಿ ಬಿದ್ದಿತ್ತು. ಅದನ್ನು ವಿತರಿಸೋಣ ಎಂದು ಪೆಟ್ರೋಲಿಯಂ ನಿಗಮಗಳ ಅಧಿಕಾರಿಗಳನ್ನು ಕರೆಸಿ ಸಭೆ ಮಾಡಿದೆ. ನಮ್ಮ ಅವಶ್ಯಕತೆಯಷ್ಟು ಸಿಲಿಂಡರ್ ಪೂರೈಸಲು 10 ವರ್ಷ ಬೇಕಾಗಬಹುದೆಂದು ಗೊತ್ತಾಯಿತು ಎಂದ ಎಚ್ಡಿಕೆ, ಜನಪ್ರಿಯ ಯೋಜನೆ ಜಾರಿ ಉತ್ಸುಕತೆಯಲ್ಲಿ ಸಮಸ್ಯೆ ಅರಿಯದೇ ತೀರ್ಮಾನ ಮಾಡಿದಾಗ ಈ ರೀತಿ ಆಗುತ್ತದೆ ಎಂದು ಬಿಸಿಮುಟ್ಟಿಸಿದರು.
ಪೆಟ್ರೋಲ್ ಬೆಲೆ ಏರಿಕೆ ನಿಯಂತ್ರಿಸುವ ವಿಷಯದಲ್ಲಿ ಸೆಸ್ ಕಡಿಮೆ ಮಾಡಬೇಕು ಎಂಬ ಬೇಡಿಕೆಗಳ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಶುಕ್ರವಾರ ಉತ್ತರಿಸುವೆ. 2019 ಮತ್ತು 2020ನೇ ಸಾಲಿನಲ್ಲಿ ಸಂಭವಿಸಿದ ಪ್ರವಾಹ ಹಾನಿಗೆ ಪರಿಹಾರ ಸಿಗದಿರುವ ಕುರಿತು ಮಾಹಿತಿ ಪಡೆದು ಕ್ರಮ ವಹಿಸುತ್ತೇನೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಕೋವಿಡ್ ಸಂದರ್ಭ ಯಾವುದೇ ಸರ್ಕಾರ ಇದ್ದರೂ ಪರಿಸ್ಥಿತಿ ಎದುರಿಸುವುದು ಸವಾಲಿನ ಕೆಲಸ. ರಾಜಕೀಯ ಟೀಕೆಗೆ ಮಹತ್ವ ಕೊಡಲ್ಲ. ಇದು ನಮ್ಮ ಸರ್ಕಾರ, ಆರೂವರೆ ಕೋಟಿ ಜನರ ಸರ್ಕಾರ. ಬಿಜೆಪಿ ಸರ್ಕಾರ ಎನ್ನಲ್ಲ. ಬಡವರ ಕಷ್ಟಕ್ಕೆ ನೆರವಾಗಲು ನಾವು ಎಲ್ಲ ರೀತಿಯ ಸಹಕಾರ ಕೊಡುತ್ತೇವೆ, ಬಡವರ ಬದುಕು ಸರಿಪಡಿಸಿ. | ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ
ಕರೊನಾ ಸಂಕಷ್ಟಕ್ಕೆ ತುತ್ತಾಗಿರುವ ಕುಟುಂಬಗಳಿಗೆ ನೆರವಾಗಲು ಆರ್ಥಿಕ ಪ್ಯಾಕೇಜ್ ಘೊಷಿಸಬೇಕು, ಇಂಧನ ಮೇಲಿನ ತೆರಿಗೆ ಇಳಿಸಿ. ಹಣ ಹೊಂದಿಸಲು ಅಮೃತ ಸರಣಿಯ ಹೊಸ ಯೋಜನೆಗಳನ್ನು ಒಂದು ವರ್ಷ ಮುಂದಕ್ಕೆ ಹಾಕಿ, ಸಂಕಷ್ಟದಲ್ಲಿ ಸಿಲುಕಿರುವ 55 ಲಕ್ಷ ಕುಟುಂಬಕ್ಕೆ 25 ಸಾವಿರ ರೂ.ನಂತೆ ಪರಿಹಾರ ಪ್ಯಾಕೇಜ್ ಘೊಷಣೆ ಮಾಡಿ ಎಂದು ಎಚ್.ಡಿ.ಕೆ.ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಎರಡು ಬಾರಿ ಲಾಕ್ಡೌನ್ ಮಾಡಿದಾಗ ಕೆಲವು ವರ್ಗದವರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಘೊಷಣೆ ಮಾಡಿದ್ದರೂ, ಅದು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ ಎಂದು ಪ್ರಶ್ನಿಸಿದರು. ಜತೆಗೆ ಕೋವಿಡ್ನಿಂದ ಮೃತರಾದ ಕುಟುಂಬದವರಿಗೆ ಒಂದು ಲಕ್ಷ ರೂ. ಪರಿಹಾರ ಏಕೆ ಕೊಡಲು ಆಗಿಲ್ಲ ಎಂದು ಕುಟುಕಿದರು. ಕೇಂದ್ರ ಸರ್ಕಾರ ಕಾಪೋರೇಟ್ ತೆರಿಗೆ ಇಳಿಸಿದ್ದು, ಸಾಮಾನ್ಯ ಜನರ ತೆರಿಗೆ ಪ್ರಮಾಣ ಹೆಚ್ಚಿಸಿದೆ. ಇಂತಹ ಬೆಳವಣಿಗೆಯನ್ನು ನಾನು ಪ್ರಧಾನಿ ಮೋದಿ ಅವರಿಂದ ನಿರೀಕ್ಷಿಸಿರಲಿಲ್ಲ ಎಂದರು. ರಾಜ್ಯ ಸರ್ಕಾರ ಕಳೆದ ಬಜೆಟ್ನಲ್ಲಿ 29,800 ಕೋಟಿ ರೂ. ಅನ್ನು ನಿಗದಿತ ಉದ್ದೇಶಕ್ಕೆ ಬಳಸಲಿಲ್ಲ, ಜತೆಗೆ 48 ಸಾವಿರ ಕೋಟಿ ರೂ. ಸಾಲ ಮಾಡಿದೆ. ಹಾಗೆಂದು ತೆರಿಗೆ ಸಂಗ್ರಹವೂ ಕಡಿಮೆ ಆಗಿಲ್ಲ, ಜನ ಬೊಕ್ಕಸ ತುಂಬಿದ್ದಾರೆ. ಇಷ್ಟು ಹಣ ಇದ್ದರೂ ಬಡವರಿಗೆ ನೆರವಾಗಲಿಲ್ಲ, ರೈತರ ಸಾಲವನ್ನೂ ಪೂರ್ಣ ವಿತರಿಸಲಿಲ್ಲ ಎಂದು ಹೇಳಿದರು.
ಬೆಂಗಳೂರು: ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಅನಿರ್ದಿಷ್ಟ ಅವಧಿ ಮುಂದೂಡಿಕೆಗೆ ಕಾರಣವಾಗಬಹುದಾದ ಕ್ಷೇತ್ರ ಪುನರ್ ವಿಂಗಡನೆ ಆಯೋಗ ರಚನೆಗೆ ಕಾರಣವಾಗುವ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ. ಶುಕ್ರವಾರ ವಿಧಾನಪರಿಷತ್ನಿಂದ ಈ ವಿಧೇಯಕಕ್ಕೆ ಅನುಮೋದನೆ ಪಡೆದುಕೊಂಡು ಸೆ.20ರಂದು ಕಾಯ್ದೆಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲು ಸರ್ಕಾರ ತರಾತುರಿ ತೋರಿಸಿದ್ದು, ಪ್ರತಿಪಕ್ಷದ ತೀವ್ರ ಆಕ್ಷೇಪ, ಸಭಾತ್ಯಾಗದ ನಡುವೆಯೂ ವಿಧೇಯಕಕ್ಕೆ ಅನುಮೋದನೆ ಪಡೆದುಕೊಂಡಿತು.
ಗುರುವಾರ ವಿಧೇಯಕದ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯರು, ಈ ವಿಧೇಯಕ ತಂದಿರುವುದೇ ಸಂವಿಧಾನ ಬಾಹಿರ. ಇದು ಬೋಗಸ್ ಎಂದು ತರಾಟೆಗೆ ತೆಗೆದುಕೊಂಡರು. ಯಾವ ಉದ್ದೇಶಕ್ಕೆ ಈ ಕಾಯ್ದೆ ತರಲಾಗಿದೆಯೋ ಅದು ಸಫಲವಾಗಲ್ಲ. ಚುನಾವಣೆ ಮುಂದೂಡಿಕೆಯೊಂದೇ ಗುರಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಈ ವಿಧೇಯಕದ ಹಿಂದೆ ಸರ್ಕಾರದ್ದು ಸದುದ್ದೇಶ ಕಾಣಿಸುತ್ತಿಲ್ಲ. ಹೊಸ ಆಯೋಗ ಮಾಡಿಕೊಳ್ಳುವುದು ತಮಗೆ ಬಂದಂತೆ ಮಾಡಿಕೊಳ್ಳಲು ಅಲ್ಲವೇ ಎಂದು ಪ್ರಶ್ನಿಸಿದರು. ‘ಸಂಪುಟ ಅನುಮೋದನೆ ನೀಡಿದ ನಿಯಮಾವಳಿ ಪ್ರಕಾರವೇ ಚುನಾವಣೆ ಆಯೋಗ ಕ್ಷೇತ್ರ ಪುನರ್ ವಿಂಗಡಣೆ ಮಾಡಿದ್ದು, ಈಗ ಅದು ಸರಿ ಇಲ್ಲ ಎಂದು ಆಯೋಗದ ಮೇಲೆ ಮುಗಿಬಿದ್ದರೆ ಹೇಗೆ?’ ಎಂದು ಕೃಷ್ಣ ಬೈರೇಗೌಡ ಕೇಳಿದರು. ಕೊನೆಗೆ ನಾವು ಸರ್ಕಾರದ ತೀರ್ಮಾನ ವಿರೋಧಿಸುವುದಾಗಿ ಹೇಳಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಬಳಿಕ ಪರ್ಯಾಲೋಚನೆ ಪ್ರಕ್ರಿಯೆ ನಡೆಯಿತು. ಜೆಡಿಎಸ್ ಶಾಸಕರು ಈ ವೇಳೆ ಸದನದಲ್ಲಿ ಹಾಜರಿದ್ದರು.
ಸಮರ್ಥನೆ: ಚುನಾವಣೆ ಮುಂದೂಡುವ ಉದ್ದೇಶವಿಲ್ಲ, ಮೀಸಲು ಬದಲಾವಣೆ ಮಾಡುವುದಕ್ಕೂ ಅವಕಾಶವಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ವ್ಯವಸ್ಥೆ ದೇಶದಲ್ಲಿ ಎಲ್ಲೂ ಇಲ್ಲ. ಹೀಗಾಗಿ ನಮ್ಮಲ್ಲೇಕೆ? ಎಂದು ಬದಲಾವಣೆ ತಂದಿದ್ದೇವೆ ಎಂದು ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಜೆ.ಸಿ.ಮಾಧುಸ್ವಾಮಿ ಸಮರ್ಥಿಸಿಕೊಂಡರು.
ರೇವಣ್ಣ ಲವಲವಿಕೆ: ಬಿಲ್ ಮೇಲಿನ ಚರ್ಚೆ ನಡೆಯು ತ್ತಿರುವಾಗಲೇ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಜೆಡಿಎಸ್ನ ಎಚ್.ಡಿ.ರೇವಣ್ಣ ಪದೇಪದೆ ಸ್ಪೀಕರ್ಗೆ ಮನವಿ ಮಾಡಿ, ಬುಲ್ಡೋಜ್ ಮಾಡಬೇಡಿ ಎಂದು ಸಭೆಯ ಗಮನಸೆಳೆದರು. ಜತೆಗೆ ಸಚಿವ ಮಾಧುಸ್ವಾಮಿ ಅವರಿಂದ ತೀಕ್ಷ್ಣ ಆಕ್ಷೇಪಕ್ಕೆ ಗುರಿಯಾದರು. ಆದರೆ ಅವರು ಯಡಿಯೂರಪ್ಪ ಕುರಿತು ಆಡಿದ ಮಾತುಗಳು ಸದನದಲ್ಲಿ ನಗೆ ಉಕ್ಕಿಸಿತು. ನಂತರ ಬಿಎಸ್ವೈ ಬಳಿಗೆ ರೇವಣ್ಣ ತೆರಳಿ ಸಮಾಲೋಚಿಸಿದರು.
ಫಲಾನುಭವಿ ವಂತಿಕೆಗೆ ಸಾಲ ಸೌಲಭ್ಯ: ನಗರ-ಪಟ್ಟಣಗಳ ಪ್ರಧಾನಮಂತ್ರಿ ವಸತಿ ಯೋಜನೆಯಡಿ ವಸತಿ ಫಲಾನುಭವಿಗಳು ತಮ್ಮ ಪಾಲಿನ ವಂತಿಕೆ ಭರಿಸುವುದಕ್ಕೆ ಬ್ಯಾಂಕ್ನಿಂದ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ವಿಧಾನಸಭೆಯಲ್ಲಿ ಗುರುವಾರ ಭರವಸೆ ನೀಡಿದರು. ಈ ವಿಷಯದತ್ತ ಕಾಂಗ್ರೆಸ್ನ ಟಿ.ರಘುಮೂರ್ತಿ ಸರ್ಕಾರದ ಗಮನಸೆಳೆದು, ಸ್ಲಂ ನಿವಾಸಿಗಳು, ಎಸ್ಸಿ-ಎಸ್ಟಿ ಫಲಾನುಭವಿಗಳ ಪಾಲಿನ ವಂತಿಕೆ ಮನ್ನಾ ಮಾಡಬೇಕು ಎಂದು ಕೋರಿದಾಗ ಜೆಡಿಎಸ್ನ ಶಿವಲಿಂಗೇಗೌಡ ಧ್ವನಿಗೂಡಿಸಿದರು. ಕೇಂದ್ರ ಸರ್ಕಾರ 2016-17ರಲ್ಲಿ ಮಂಜೂರು ಮಾಡಿದ್ದ 1.80 ಲಕ್ಷ ಮನೆಗಳು ಫಲಾನುಭವಿ ವಂತಿಕೆ ಸಮಸ್ಯೆಯಿಂದ ನನೆಗುದಿಗೆ ಬಿದ್ದಿವೆ. ಎಲ್ಲವನ್ನೂ ಸರ್ಕಾರದಿಂದ ಭರಿಸುವುದು ಕಷ್ಟವಾಗಲಿದೆ. ಹೀಗಾಗಿ ಶಾಸಕರು ಕೂಡ ಸಹಕರಿಸಿ ಫಲಾನುಭವಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದ ಸೋಮಣ್ಣ, ಈಗಾಗಲೆ 33 ಸಾವಿರ ಫಲಾನುಭವಿಗಳಿಗೆ ಸಾಲದ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನದ ಬಳಿಕ ಜಿಲ್ಲಾವಾರು ಪ್ರವಾಸ ಮಾಡಿ, ಶಾಸಕರು, ಅಧಿಕಾರಿಗಳು ಹಾಗೂ ಬ್ಯಾಂಕರ್ಸ್ ಸಭೆ ನಡೆಸಿ ಸಾಲ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.