

ಶಿವಮೊಗ್ಗ : ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರ ವರ್ತನೆ ಹೀಗೇ ಮುಂದುವರಿದರೆ, ರಾಜ್ಯದ ಜನರು ಅವರಿಗೆ ಛೀಮಾರಿ ಹಾಕುವ ದಿನ ಬರಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಸಿಎಂ ಬಿಎಸ್ವೈ ಅವರು ದೆಹಲಿಗೆ ಕೊಂಡೊಯ್ದ ಐದಾರು ಬ್ಯಾಗ್ನಲ್ಲಿ ಏನಿತ್ತು ಎಂದು ಪ್ರಶ್ನಿಸಿರುವುದು ಕುಮಾರಸ್ವಾಮಿ ಅವರ ಕೀಳು ರಾಜಕೀಯಕ್ಕೆ ನಿದರ್ಶನವಾಗಿದೆ ಎಂದು ಕಿಡಿಕಾರಿದರು.
ರಾಜ್ಯದ ನಾಲ್ವರು ನೂತನವಾಗಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರನ್ನು ಅಭಿನಂದಿಸಲು ಹಾರ, ಸ್ಮರಣಿಕೆಯನ್ನು ಐದಾರು ಬ್ಯಾಗ್ಗಳಲ್ಲಿ ಕೊಂಡೊಯ್ದರೆ, ಅದಕ್ಕೆ ಎಚ್ಡಿಕೆ ಕೊಂಕು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, "ಯಾರಿಂದಲೂ ಏನನ್ನಾದರೂ ಪಡೆಯುವ ವ್ಯಕ್ತಿತ್ವ ಪ್ರಧಾನಿ ನರೇಂದ್ರ ಮೋದಿ ಅವರದ್ದಲ್ಲ. ಯಾರಿಗಾದರೂ ಏನನ್ನಾದರೂ ಕೊಟ್ಟು ತೃಪ್ತಿಪಡಿಸುವ ಅನಿವಾರ್ಯತೆ ಸಿಎಂ ಯಡಿಯೂರಪ್ಪ ಅವರಿಗಿಲ್ಲ" ಎಂದರು.