

ಬೆಂಗಳೂರು: ಕುಮಾರಸ್ವಾಮಿ ವಿದೇಶದಲ್ಲಿಯೇ ಇರಲಿ, ಅದಕ್ಕೆ ಬೇಕಾದ ವ್ಯವಸ್ಥೆ ನಾವು ಮಾಡುತ್ತೇವೆ ಎಂಬ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಲ್ಲಿ ಲೂಟಿ ಹೊಡೆಯೋಕೆ ನಮ್ಮನ್ನ ಬಿಟ್ಬಿಡಿ, ನೀವು ವಿದೇಶದಲ್ಲಿ ಇರಿ ಅಂತ ಸಲಹೆ ಕೊಟ್ಟ ಹಾಗಿದೆ. ಏಕೆಂದರೆ, ಮಾನ ಮಾರ್ಯಾದೆ ಇಲ್ಲದೆ ಇಲ್ಲಿ ದರೋಡೆ ಮಾಡಿಕೊಂಡು ಕೂತಿದ್ದಾರೆ ಎಂದು ಹರಿಹಾಯ್ದರು.
ವಿದೇಶಿ ಪ್ರವಾಸಕ್ಕೆ ನಾನು ಅವರಿಂದ ವ್ಯವಸ್ಥೆ ಮಾಡಿಸಿಕೊಂಡು ಹೋಗಬೇಕೆ? ಆ ಪಾಪದ ಹಣ ತಗೊಂಡು ಹೋಗಬೇಕಾ? ವಿದೇಶಕ್ಕೆ ಹೋಗುವ ಯೋಗ್ಯತೆಯೂ ನನಗಿಲ್ಲವೆ? ಕಾಂಬೋಡಿಯಾಗೆ ಸ್ನೇಹಿತರ ಆಹ್ವಾನ ಇತ್ತು, ಹೋಗಿದ್ದೆ. ಅಲ್ಲಿನ ಸುವಿಶಾಲ ಪ್ರದೇಶದಲ್ಲಿ ಕಟ್ಟಿರುವ ಆಂಕರ್ ವಾಟ್ ಎಂಬ ಅದ್ಭುತವಾದ ದೇವಸ್ಥಾನ ಇದೆ. ನಮ್ಮ ದೇಶದಲ್ಲೂ ಇಲ್ಲ ಅಂತ ದೇವಸ್ಥಾನ. ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಇರುವ ದೇವಸ್ಥಾನ. ಅದನ್ನು ಕಂಡು ನಾನು ವಿಸ್ಮಿನಾದೆ ಎಂದರು.
ಕಾಂಬೋಡಿಯಾ ಇತ್ತೀಚಿಗೆ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ಭಾರೀ ಸಂಕಷ್ಟದಲ್ಲಿ ಇದ್ದ ಆ ದೇಶ ಈಗ ತುಂಬ ಅದ್ಭುತವಾಗಿ ಬೆಳೆಯುತ್ತಿದೆ. ಕಾಂಬೋಡಿಯಾದ ಜಿಡಿಪಿ ಶೇ.7.7 ರಷ್ಟಿದೆ ಎಂದು ಅಲ್ಲಿನ ಮಂತ್ರಿಗಳೊಬ್ಬರು ಹೇಳಿದರು. ಸಾರ್ವಜನಿಕರ ಹಣದ ವಿನಿಯೋಗದ ಬಗ್ಗೆ ಅಲ್ಲಿ ಕಠಿಣ ನಿಯಮಗಳಿವೆ. ನಮ್ಮಲ್ಲಿ ಹಣಕ್ಕೆ ಕೊರತೆ ಇಲ್ಲ, ಈಗ ಲೂಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯಪಾಲರ ಬಳಿ ಏಕೆ ಹೋದರು?
ಕೃಷಿ ಅಧಿಕಾರಿಗಳು ರಾಜ್ಯಪಾಲರ ಬಗ್ಗೆ ಬರೆದಿರುವ ಪತ್ರದ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ವಿರುದ್ಧ ಬರೆದಿರುವ ಪತ್ರ ನಕಲಿ ಎನ್ನುವುದಾದರೆ ಕೃಷಿ ಸಚಿವರು ರಾಜ್ಯಪಾಲರ ಬಳಿಗೆ ಏಕೆ ಹೋದರು? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ನಾನು ಆ ಪ್ರಕರಣದ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಎಲ್ಲೂ ಆ ಬಗ್ಗೆ ಮಾತನಾಡಿಲ್ಲ. ನನ್ನ ಹೆಸರು ಏಕೆ ತಳುಕು ಹಾಕುತ್ತಿದ್ದಾರೆ? ಅವರಿಗೆ ಅಲ್ಲೂ ನನ್ನ ಹೆಸರೇ ಬೇಕು, ಯಾಕೆಂದರೆ ನನ್ನದೇ ಭಯ ಇರೋದು ಅವರಿಗೆ ಎಂದು ಕುಮಾರಸ್ವಾಮಿ ಕುಟುಕಿದರು.