

ಚನ್ನಪಟ್ಟಣ : ಕರೊನಾ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸೇರಿ ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕಾರಣ ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಸೋಮವಾರ ಆಯೋಜಿಸಿದ್ದ ಕೋವಿಡ್ ಲಸಿಕಾ ಮೇಳದಲ್ಲಿ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದರು. ಇದು ರಾಜಕಾರಣ ಮಾಡುವ ಸಮಯವಲ್ಲ. ಸಿಎಂ ಸ್ಥಾನ ಬದಲಾವಣೆ ಮಾಡಬೇಕು ಎಂಬುದಾದರೆ ಸಮಯ ವ್ಯರ್ಥ ಮಾಡದೆ ಬದಲಾವಣೆ ಮಾಡಿಕೊಳ್ಳಲಿ. ಇಲ್ಲವೇ ಬಿಎಸ್‌ವೈ ಅವರನ್ನೇ ಮುಂದುವರಿಸುವುದಾದರೆ ಅದರ ಬಗ್ಗೆ ಸ್ಪಷ್ಟನೆ ಇರಬೇಕು.
ಹೀಗಾಗಿ ಬಿಜೆಪಿ ಹೈಕಮಾಂಡ್ ಈ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದರು. ಲಸಿಕೆ ವಿಚಾರದಲ್ಲಿ ರಾಜಕೀಯ ಬೇಡ: ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡಿದರೆ ಅದು ಜನತೆಯ ಜೀವದ ಜೊತೆ ಚೆಲ್ಲಾಟವಾಡಿದಂತೆ. ವಿರೋಧ ಪಕ್ಷಗಳು ಸರ್ಕಾರಕ್ಕೆ ಉತ್ತಮ ಸಲಹೆಗಳನ್ನು ನೀಡಬೇಕು.
ಸರ್ಕಾರವೂ ವಿರೋಧ ಪಕ್ಷಗಳ ಉತ್ತಮ ಸಲಹೆಗಳನ್ನು ಸ್ವೀಕರಿಸಬೇಕು. ಇಡೀ ರಾಜ್ಯಕ್ಕೆ ಹೋಲಿಕೆ ಮಾಡಿದರೆ, ಜಿಲ್ಲೆಯಲ್ಲಿ ಹೆಚ್ಚಿನ ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೂರನೇ ಅಲೆ ಎದುರಾಗುವ ಆತಂಕವಿದೆ. ಹಾಗಾಗಿ ಎಲ್ಲರೂ ಜಾಗ್ರತೆಯಿಂದ ಇರಬೇಕು ಎಂದು ಸಲಹೆ ನೀಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಮುಖಂಡರಾದ ಹಾಪ್‌ಕಾಮ್ಸ್ ದೇವರಾಜು, ಎಸ್.ಲಿಂಗೇಶ್‌ಕುಮಾರ್ ಇದ್ದರು.
ಆತ್ಮಾವಲೋಕನ ಮಾಡಿಕೊಳ್ಳಲಿ : ಜಿಲ್ಲೆಯಲ್ಲಿ ಉತ್ತಮ ಆರೋಗ್ಯಸೇವೆ ದೊರೆಯದಿರಲು ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರೇ ಕಾರಣ. ನಾನು ಸಿಎಂ ಆಗಿದ್ದಾಗ ಯೋಜಿಸಿದ್ದ ರಾಜೀವ್‌ಗಾಂಧಿ ಆರೋಗ್ಯ ವಿವಿ ಆರಂಭಗೊಂಡಿದ್ದರೆ, ಕೋವಿಡ್ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಅನುಕೂಲವಾಗುತ್ತಿತ್ತು. ಅದನ್ನು ಹಾಳುಮಾಡಿದ್ದು ಯಾರು ಎಂಬುದನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಎಚ್‌ಡಿಕೆ ತಿಳಿಸಿದರು.
ನನ್ನ ಬದ್ಧತೆ ಪ್ರಶ್ನಿಸಬೇಡಿ :
ತಾಲೂಕಿನ ಬಗ್ಗೆ ಎಚ್‌ಡಿಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಕೈ ಮತ್ತು ಕಮಲ ಪಾಳಯದ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಾಲೂಕಿನ ಬಗ್ಗೆ ನನಗಿರುವ ಬದ್ಧತೆ ಪ್ರಶ್ನಿಸಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ. ಕ್ಷೇತ್ರದ ಮೇಲೆ ಸದಾ ನಿಗಾ ಇಡುತ್ತಿದ್ದೇನೆ. ಅಧಿಕಾರಿಗಳು ನನ್ನ ಅವಶ್ಯಕತೆ ಬಾರದಂತೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಬಾರಿ 6.5 ಕೋಟಿ ರೂಪಾಯಿ ಹಣ ವ್ಯಯಿಸಿ ಜನರಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದೇನೆ. ಕೆಲವರು ಗ್ರಾಪಂಗಳ 15ನೇ ಹಣಕಾಸು ಯೋಜನೆ ಹಣದಲ್ಲಿ ುಡ್‌ಕಿಟ್ ಹಂಚಿ ಫೋಟೋ ಹಾಕಿಸಿಕೊಳ್ಳುತ್ತಿದ್ದಾರೆ. ಗ್ರಾಪಂಗೆ ಒಳಚರಂಡಿಗಾಗಿ ಇರುವ ಅನುದಾನದಲ್ಲಿ ಕಿಟ್ ಖರೀದಿಸಿ, ಅದನ್ನು ಹಂಚಲು ಇವರೇ ಬೇಕಾ...ಇವರಿಗೆ ಕೊಡಲು ದೇವರು ಕಡಿಮೆ ಮಾಡಿದ್ದಾನೆಯೇ? ಎಂದು ಸಂಸದ ಡಿ.ಕೆ. ಸುರೇಶ್ ಅವರನ್ನು ಪರೋಕ್ಷವಾಗಿ ಕುಟುಕಿದರು.