

ಹಿರಿಯೂರು (ಚಿತ್ರದುರ್ಗ): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ನನಗೆ ಸಂತೋಷ, ಅಸೂಯೆ ಪಡುವುದಿಲ್ಲ. ಸಿಎಂ ಪಟ್ಟ ಯಾರಿಗೆ ಸಿಗುತ್ತದೆ ಎನ್ನುವುದು ಭಗವಂತನ ಇಚ್ಛೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ನೆಹರು ಮೈದಾನದಲ್ಲಿ ತಾಲೂಕು ಒಕ್ಕಲಿಗರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ-ಒಕ್ಕಲಿಗರ ಸಂಘಟನಾ ಸಮಾವೇಶದಲ್ಲಿ ಮಾತನಾಡಿದರು. ಮೈಸೂರಿನಲ್ಲಿ ಈಚೆಗೆ ನಡೆದ ಒಕ್ಕಲಿಗರ ಸಂಘದ ಸಭೆಯಲ್ಲಿ ಸಿಎಂ ಆಗುವ ಆಸೆಯನ್ನು ಡಿ.ಕೆ.ಶಿವಕುಮಾರ್ ವ್ಯಕ್ತಪಡಿಸಿ, ಹುಮ್ಮಸ್ಸಿನಲ್ಲಿ ಮುನ್ನುಗ್ಗುತ್ತಿದ್ದಾರೆ. ಆದರೆ, ಅವರ ಪಕ್ಷದಲ್ಲಿ ಅಡ್ಡಗಾಲು ಹಾಕುವವರು ಇದ್ದಾರೆ. ಭಗವಂತನ ಇಚ್ಛೆಯಿಂದ ಸಿಎಂ ಆದರೆ ನಾನು ಅಸೂಯೆ ಪಡುವುದಿಲ್ಲ, ಸಹಕಾರ ನೀಡುತ್ತೇನೆ ಎಂದು ಘೊಷಿಸಿದರು.
ಅಧಿಕಾರ ಗದ್ದುಗೆ ಏರಲು ಕಾಂಗ್ರೆಸ್ನಲ್ಲಿ ಅವರು ಹೋರಾಟ ಮಾಡಲಿ. ನನ್ನ ಪಕ್ಷದಲ್ಲಿ ನಾನು ಹೋರಾಟ ಮಾಡುತ್ತೇನೆ. ಜನರ ಆಶೀರ್ವಾದ ಯಾರ ಮೇಲೆ ಇದೆ ಎನ್ನುವುದು ಯಾರಿಗೆ ಗೊತ್ತು? ಕಾಂಗ್ರೆಸ್ನಲ್ಲಿ ಡಿಕೆಶಿ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಅವರಿಗೂ ಅರಿವಿದೆ, ನನಗೂ ಗೊತ್ತು ಎಂದು ಮಾರ್ವಿುಕವಾಗಿ ಹೇಳಿದರು.
ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಮಾತನಾಡಿ, ಸೂರ್ಯನ ಬೆಳಕಿನ ಕಿರಣಗಳು ಕಿಟಕಿ-ಬಾಗಿಲು ಮೂಲಕ, ಲಕ್ಷ್ಮೀ ಮನೆ ಹೊಸ್ತಿಲಲ್ಲಿ ಬಂದು ನಿಂತಿದ್ದು, ಸಮಾಜ ನನ್ನನ್ನು ಬೆಂಬಲಿಸಬೇಕು. ಈ ಬಗ್ಗೆ ಸಮಾಜದ ಇಬ್ಬರು ಶ್ರೀಗಳಿಗೆ ಮನವರಿಕೆ ಮಾಡಲಾಗಿದೆ ಎಂದು ಸಿಎಂ ಪಟ್ಟದ ಆಸೆಯನ್ನು ಸಮಾವೇಶದಲ್ಲಿ ಜನರ ಮುಂದೆ ಬಿಚ್ಚಿಟ್ಟರು.
ಸಾನ್ನಿಧ್ಯ ವಹಿಸಿದ್ದ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ, ಕುಮಾರಸ್ವಾಮಿ ಅವರನ್ನು 2ನೇ ಬಾರಿಗೆ ಸಿಎಂ ಮಾಡಲು ಡಿ.ಕೆ.ಶಿವಕುಮಾರ್ ಅವರು ಶ್ರಮಿಸಿದ್ದು ಸ್ಮರಣೀಯ. ನಮ್ಮ ಸಮಾಜದಲ್ಲಿ ಅವರು ಹುಟ್ಟಿದ್ದು ಪುಣ್ಯ ಎಂದು ಬಣ್ಣಿಸಿದರು. ಕುಂಚಿಟಿಗ ಒಬಿಸಿ ವಿಚಾರದಲ್ಲಿ ಸಮಾಜವನ್ನು ಇಬ್ಭಾಗ ಮಾಡುವ ವ್ಯವಸ್ಥಿತ ಪಿತೂರಿ ಮಾಡುತ್ತಿದ್ದು, ಸಮಾಜ ಒಡೆಯುವುದು ಮಹಾಪಾಪ. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಕುಂಚಿಟಿಗ ಸಮಾಜಕ್ಕೆ ಕೇಂದ್ರದ ಒಬಿಸಿ ಮೀಸಲಾತಿ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ ಮಾಡಲಾಗಿತ್ತು, ಅವರು ಕೂಡ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು, ಇತ್ತಿಚೇಗೆ ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ತರಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಜೈಕಾರಕ್ಕೆ ಪೈಪೋಟಿ
ಸಮಾವೇಶದ ವೇದಿಕೆಗೆ ಎಚ್ಡಿಕೆ ಆಗಮಿಸಿದ ವೇಳೆ ಜೆಡಿಎಸ್ ಬೆಂಬಲಿಗರು ಎಚ್ಡಿಕೆ ಪರ ಘೊಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಡಿಕೆ ಎಂದು ಕೂಗಿದರು. ಸಾನ್ನಿಧ್ಯ ವಹಿಸಿದ್ದ ಸ್ವಾಮೀಜಿಗಳ ಮುಂದೆ ಬೆಂಬಲಿಗರು ಜಟಾಪಟಿ ನಡೆಸಿ ಗೊಂದಲ ಮೂಡಿಸಿದರು.
ನಾಡಿಗೆ ಅನ್ನ ನೀಡುವ ಸಮುದಾಯವಾದ ಒಕ್ಕಲಿಗರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಮಕ್ಕಳಿಗೆ ಉನ್ನತ ವ್ಯಾಸಂಗ ಕೊಡಿಸುವತ್ತ ಚಿತ್ತ ಹರಿಸಬೇಕಿದೆ. ಹಳ್ಳಿಗಾಡಿನಲ್ಲಿರುವ ನಮ್ಮವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದ ಜವಾಬ್ದಾರಿ ಎಲ್ಲರದ್ದಾಗಿದೆ.
| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಪೀಠ
ರಾಜ್ಯದಲ್ಲಿ ಒಕ್ಕಲಿಗ-ವೀರಶೈವ ಲಿಂಗಾಯತ ಸಮಾಜವನ್ನು ಒಡೆದು ಆಳುವ ಹುನ್ನಾರ ನಡೆಯುತ್ತಿದ್ದು, ಎರಡು ಸಮಾಜಗಳು ರಥದ ಎರಡು ಚಕ್ರಗಳಿದ್ದಂತೆ. ಎಚ್ಚೆತ್ತು ಒಗ್ಗೂಡಿ ಮುನ್ನಡೆಯಬೇಕು. ಕುಂಚಿಟಿಗ ಸಮುದಾಯಕ್ಕೆ ಒಬಿಸಿ ಮೀಸಲು ನೀಡಲು ನನ್ನ ಬೆಂಬಲವಿದೆ.
| ಶ್ರೀ ನಂಜಾವಧೂತ ಸ್ವಾಮೀಜಿ ಸ್ಪಟಿಕಪುರಿ ಸಂಸ್ಥಾನಮಠ, ಪಟ್ಟನಾಯಕನಹಳ್ಳಿ