ಕುಮಾರಸ್ವಾಮಿ-ಯೋಗೇಶ್ವರ್​ ನಡುವೆ ನಾಮಿನಿ ವಾರ್!

hdk cpy
Published on

ಚನ್ನಪಟ್ಟಣ: ಬೊಂಬೆನಾಡಿನಲ್ಲಿ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನಡುವಿನ ರಾಜಕೀಯ ಕಾಳಗ ಗರಿಗೆದರಿದೆ.

ವಿವಿಧ ಸಮಿತಿಗಳಿಗೆ ಸರ್ಕಾರದ ನಾಮನಿರ್ದೇಶನ ವಿಚಾರದಲ್ಲಿ ಇವರಿಬ್ಬರೂ ಜಿದ್ದಿಗೆ ಬಿದ್ದಿದ್ದಾರೆ. ಕೆಲದಿನಗಳ ಹಿಂದೆ ತಾಲೂಕು ಭೂ ನ್ಯಾಯ ಮಂಡಳಿಗೆ ತಮ್ಮ ಪಕ್ಷದ ನಾಲ್ವರು ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಿಸುವಲ್ಲಿ ಎಚ್​ಡಿಕೆ ಯಶಸ್ವಿಯಾಗಿದ್ದರು. ಆದರೆ, ಈ ನಾಮನಿರ್ದೇಶನವನ್ನು ರದ್ದುಗೊಳಿಸಿ, ಬಿಜೆಪಿ ಪಕ್ಷದ ನಾಲ್ವರು ಮುಖಂಡರನ್ನು ಆ ಸದಸ್ಯ ಸ್ಥಾನಕ್ಕೆ ಕೂರಿಸುವ ಮೂಲಕ ಸಿ.ಪಿ. ಯೋಗೇಶ್ವರ್ ಸೆಡ್ಡುಹೊಡೆದಿದ್ದಾರೆ.

ಭೂ ನ್ಯಾಯಮಂಡಳಿಗೆ ಜೆಡಿಎಸ್ ಕಾರ್ಯಕರ್ತರಾದ ವಡ್ಡರಹಳ್ಳಿ ರಾಜಣ್ಣ, ಪಟ್ಲು ಸುಕನ್ಯಾ, ಮೆಂಗಳ್ಳಿ ಮರಿಸ್ವಾಮಿ, ಕೂಡ್ಲೂರು ಸಿದ್ದರಾಮು ಈ ಹಿಂದೆ ನಾಮ ನಿರ್ದೇಶನಗೊಂಡಿದ್ದರು. ಇದೀಗ ಈ ಸಮಿತಿಗೆ ಬಿಜೆಪಿ ಕಾರ್ಯಕರ್ತರಾದ ಗರಕಹಳ್ಳಿ ಚೇತನ್, ಗೌಡಗೆರೆ ದಯಾನಂದ್, ಹುಲುವಾಡಿ ಭವ್ಯ, ಮಂಗಳವಾರಪೇಟೆ ಆನಂದ್ ಎಂಬುವವರು ನೂತನ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.

ಸರ್ಕಾರದ ನಾಮನಿರ್ದೇಶನವನ್ನು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಡಿಸುವ ಮೂಲಕ ಮಾಜಿ ಸಿಎಂ ಎಚ್​ಡಿಕೆ ಅವರು ಸಿ.ಪಿ.ಯೋಗೇಶ್ವರ್​ಗೆ ಟಾಂಗ್ ನೀಡಿದ್ದರು. ಇದರೊಂದಿಗೆ ಬಗರ್ ಹುಕುಂ ಸಮಿತಿಗೂ ಜೆಡಿಎಸ್ ಕಾರ್ಯಕರ್ತರನ್ನು ಪ್ರತಿಷ್ಠಾಪಿಸಲು ಎಚ್​ಡಿಕೆ ಯತ್ನಿಸಿದರಾದರೂ, ಕೊನೇಗಳಿಗೆಯಲ್ಲಿ ಅವುಗಳು ಕೂಡ ಬಿಜೆಪಿ ಪಾಲಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net