ಕಾವೇರಿ ನೀರಿಗೆ ತಮಿಳುನಾಡು ಕನ್ನ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದ ಎಚ್​ಡಿಕೆ

HDK
Published on

ಬೆಂಗಳೂರು: ಕಾವೇರಿಯ ಹೆಚ್ಚುವರಿ ನದಿ ನೀರನ್ನು ಬಳಸಿಕೊಂಡು ಅದನ್ನು ಗುಂಡಾರು-ವೆಲ್ಲಾರು-ವೈಗೈ ನದಿಗಳಿಗೆ ಜೋಡಣೆ ಮಾಡುವ ತಮಿಳುನಾಡಿನ ಯೋಜನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಈ ಯೋಜನೆಗೆ ಕೇಂದ್ರ ಸರ್ಕಾರವೇ ಅನುದಾನ ನೀಡುತ್ತಿರುವುದು ನಮ್ಮವರಿಗೇ ಅರಿವಿಗೆ ಬಾರದೇ ಹೋಗಿದ್ದು ಆಶ್ಚರ್ಯಕರ, ಬರೀ ರಾಜಕೀಯದಲ್ಲಿ ಮುಳುಗಿ ಹೋದವರಿಗೆ ನಮ್ಮ ರಾಜ್ಯದ ಹಿತಾಸಕ್ತಿ ಎಲ್ಲಿ ನೆನಪಿಗೆ ಬರುತ್ತದೆ ಹೇಳಿ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಇಂಥದ್ದೊಂದು ಯೋಜನೆ ಬಗ್ಗೆ ಅರಿವಿಲ್ಲದೇ ಇದ್ದದ್ದು ರಾಜ್ಯದ ಜಲಸಂಪನ್ಮೂಲ ಸಚಿವರ ವೈಫಲ್ಯವೇ ಸರಿ. ಅವರು ಚಾಲೆಂಜ್‌ ರಾಜಕೀಯ ಮಾಡುವುದು ಬಿಟ್ಟು, ಅವರನ್ನು ಸೋಲಿಸುತ್ತೇನೆ, ಇವರನ್ನು ಸೋಲಿಸುತ್ತೇನೆ ಎನ್ನುವುದನ್ನು ಬಿಟ್ಟು ರಾಜ್ಯದ ಹಿತಕ್ಕಾಗಿ ಚಾಲೆಂಜ್‌ ಮಾಡಲಿ. ಕನಿಷ್ಠ ಜಲಸಂಪನ್ಮೂಲ ಇಲಾಖೆ ಏನು ಬೇಡುತ್ತದೆಯೋ ಅದನ್ನು ಗಳಿಸಿಕೊಳ್ಳಲಿ ಎಂದಿದ್ದಾರೆ.

ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ದೀರ್ಘಾವಧಿಯ ಹೋರಾಟದಲ್ಲಿ ತಕ್ಕಮಟ್ಟಿನ ಯಶಸ್ಸು ಸಿಕ್ಕಿದೆ. ಈ ವರೆಗೆ ಜಲಸಂಪನ್ಮೂಲ ನಿರ್ವಹಿಸಿದವರ ಬದ್ಧತೆಯೂ ಇದಕ್ಕೆ ಕಾರಣ ಇರಬಹುದು. ಆದರೆ, ಈ ಸರ್ಕಾರದಲ್ಲಿ ಅದು ಕಾಣುತ್ತಿಲ್ಲ. ಇಲಾಖೆಯ ಕಚೇರಿಯಲ್ಲಿ ನಾನು ಕೂರಬೇಕೆಂಬುದಷ್ಟೇ ಸಚಿವರ ಇಚ್ಚೆಯಾಗಿತ್ತು. ಅದು ಈಡೇರಿದ ಮೇಲೆ ಇಲಾಖೆ ನಗಣ್ಯವಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರದಲ್ಲೂ ಬಿಜೆಪಿಯದ್ದೇ ಸರ್ಕಾರವಿದೆ. ರಾಜ್ಯದಿಂದ ಬಿಜೆಪಿಗೆ ಅತ್ಯಧಿಕ ಸಂಸದರು ಸಿಕ್ಕಿದ್ದಾರೆ. ಹೀಗಾಗಿ ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಗೌರವಯುತವಾಗಿ, ನ್ಯಾಯಯುತವಾಗಿ ಕರ್ನಾಟಕದ ಹಿತ ಕಾಯಬೇಕು. ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕಾವೇರಿ ವಿಚಾರದಲ್ಲಿ ಬಿಸಿಮುಟ್ಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net