

ಬೆಂಗಳೂರು: ಹಾಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ದಿ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಬಿಜೆಪಿ-ಜೆಡಿಎಸ್ ಸದಸ್ಯರ ವಿರೋಧದ ನಡುವೆ ಡಿಸಿಎಂ ಡಿಕೆ. ಶಿವಕುಮಾರ್ ಮಂಡಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಗ್ರೇಟರ್ ಬೆಂಗಳೂರು ವಿಧೇಯಕದ ಕುರಿತು ಕೇಂದ್ರ ಸಚಿವ ಎಚ್ಡಿ. ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದು, ಅಧಿಕಾರ, ಅಭಿವೃದ್ಧಿ ವಿಕೇಂದ್ರೀಕರಣವಲ್ಲ, ಇದು ಲೂಟಿಯ ವಿಕೇಂದ್ರೀಕರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಎಚ್ಡಿ. ಕುಮಾರಸ್ವಾಮಿ (HD Kumaraswamy), ಹೋಳು ಮಾಡವುದು, ಒಡೆದಾಳುವುದರಲ್ಲಿ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಸಾಟಿ, 75 ವರ್ಷದಿಂದ ಇದನ್ನೇ ಮಾಡಿದೆ, ಮುಂದುವರಿಸಿದೆ. ಕಾಂಗ್ರೆಸ್ ನೀತಿಯೇ Divide and Rule. ಅಂದು: ಅಖಂಡ ಭಾರತವನ್ನು ಹೋಳು ಮಾಡಿತು! ಇಂದು: ಬೆಂಗಳೂರು ಮಹಾನಗರವನ್ನು ಹೋಳು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ದುರುದ್ದೇಶವಿಷ್ಟೇ; ನಾಡಪ್ರಭು ಕೆಂಪೇಗೌಡರ ಪರಂಪರೆಯನ್ನು ಬೇರುಸಹಿತ ಹಾಳು ಮಾಡುವುದು. ಗ್ರೇಟರ್ ಬೆಂಗಳೂರು ಹೆಸರಿಗಷ್ಟೇ. ಲೂಟರ್ ಉದ್ದೇಶ ಕೊಳ್ಳೆ ಹೊಡೆಯುವುದಷ್ಟೇ. ಅಧಿಕಾರ, ಅಭಿವೃದ್ಧಿ ವಿಕೇಂದ್ರೀಕರಣವಲ್ಲ, ಇದು ಲೂಟಿಯ ವಿಕೇಂದ್ರೀಕರಣ. ಲೂಟಿಕೋರರಾದ ಮಹಮ್ಮದ್ ಘಜ್ನಿ, ಮೊಹಮದ್ ಘೋರಿ ಸಂಪದ್ಭರಿತ ಭಾರತವನ್ನು ಲೂಟಿಗೈದರು. ಬೆಂಗಳೂರಿಗೆ ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ. ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ ಎಂದು ಎಚ್ಡಿ. ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಆಡಳಿತ ವೀಕೆಂದ್ರಿಕರಣ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಖ್ಯೆಯನ್ನು ಹೆಚ್ಚು ಮಾಡುವ ಉದ್ದೇಶದ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ವನ್ನು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಸೋಮವಾರ (ಮಾರ್ಚ್ 11) ಅಂಗೀಕರಿಸಲಾಯಿತು. ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆ ಹಾಗೂ ಮೇಯರ್, ಉಪ ಮೇಯರ್‌ಗೆ 30 ತಿಂಗಳ ಅವಧಿಯನ್ನು ಈ ಮಸೂದೆ ಒದಗಿಸುತ್ತದೆ.