ನಾನು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡುವಷ್ಟು ದೊಡ್ಡವನಲ್ಲ; ಎಚ್​.ಡಿ.ಕುಮಾರಸ್ವಾಮಿ

Politics
Published on

ಮೈಸೂರು: ಸಿದ್ದರಾಮಯ್ಯ ವಿಧಾಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಹುಡುಕಾಟ ನಡೆಸುತ್ತಿರುವುದು ಒಂದು ವರ್ಷದಿಂದ ನಡೆಯುತ್ತಿದೆ. ಅವರು ವರುಣ ಕ್ಷೇತ್ರಕ್ಕೆ ಬರುತ್ತಾರಾ ನೋಡೋಣ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ರಾಷ್ಟ್ರೀಯ ಪಕ್ಷದ ನಾಯಕನಾಗಿ, 20 ವರ್ಷ ಮಂತ್ರಿಯಾಗಿದ್ದವರು. ಅನುಭವಿ ರಾಜಕಾರಣಿ. ಅವರಿಗೆ ಸಲಹೆ ನೀಡುವಷ್ಟು ನಾನು ದೊಡ್ಡವನಲ್ಲ. ಆದರೆ ಎಲ್ಲಿ ಎಂಬ ಬಗ್ಗೆ ಅವರೇ ಗೊಂದಲ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ಟು, ಈ ಬಾರಿ ಕೋಲಾರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಆದರೆ ಚುನಾವಣೆಯ ಸಮಯ ಹತ್ತಿರವಾಗುತ್ತಿದ್ದಂತೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ. ಶುಕ್ರವಾರ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಒಂದೇ ಹೆಸರನ್ನು ಪ್ರಸ್ತಾವಿಸಿ, ಅಂತಿಮಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ, ಕೋಲಾರ ಹೆಸರು ಬಂದ ಕೂಡಲೇ ಸಿದ್ದರಾಮಯ್ಯ, ಕೋಲಾರ ಸ್ಫರ್ಧೆ ಬಗ್ಗೆ ಈಗ ಚರ್ಚೆ ಬೇಡ, ನಂತರ ಮಾಡೋಣ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು.

ಇದೀಗ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಎಚ್​​.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸುತ್ತಾ, ಕಾರ್ಯಕರ್ತರಾಗಲಿ, ಪಕ್ಷವಾಗಲಿ ಗೊಂದಲ ಸೃಷ್ಟಿ ಮಾಡಿಲ್ಲ. ಬದಲಾಗಿ ಅವರೇ ಸೃಷ್ಟಿ ಮಾಡಿಕೊಂಡಿರುವುದು. ಇಂತಹ ಪರಿಸ್ಥಿತಿಯಲ್ಲಿ ಅಂತಿಮವಾಗಿ ಅವರು ಯಾವ ಲೆಕ್ಕಾಚಾರದಲ್ಲಿದ್ದಾರೋ ಕಾದು ನೋಡೊಣ. ಅಂತಿಮವಾಗಿ ವರುಣಾ ಕ್ಷೇತ್ರದಲ್ಲಿ ನಮ್ಮ ಕಾರ್ಯತಂತ್ರ ಬದಲಾಗುವುದಿಲ್ಲ. ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net