'ಪ್ರಧಾನಿ ಮೋದಿ ಅವರಿಂದ ನನ್ನ ಯೋಜನೆಗಳು ಹೈಜಾಕ್​'

Narendra Modi Editorial
Published on

ಬೆಂಗಳೂರು: ನನ್ನ ಸರ್ಕಾರದಲ್ಲಿ ಜಾರಿಗೆ ತಂದ ಯೋಜನೆಗಳನ್ನೇ ಹೈಜಾಕ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವುಗಳನ್ನು ತಮ್ಮ ಸ್ವಂತ ಯೋಜನೆಗಳು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಪೀಣ್ಯದಲ್ಲಿ ಕೈಗಾರಿಕೋದ್ಯಮಿಗಳ ಸಭೆ ನಡೆಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಕೃಷ್ಣಮೂರ್ತಿ ಪರ ಮತಯಾಚಿಸಿ ಮಾತನಾಡಿದ ಎಚ್​ಡಿಕೆ, ನಾನು 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್​ ಸ್ಥಾಪಿಸಲು ಉತ್ತೇಜನ ನೀಡಿದೆ. ಅದನ್ನೇ ಈಗ ಆತ್ಮನಿರ್ಭರ ಭಾರತ ಎಂದು ಮೋದಿ ಹೇಳುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡಲು ಬಡವರ ಬಂಧು ಯೋಜನೆ ಜಾರಿಗೆ ತಂದಿದ್ದೆ, ಈಗ ಮೋದಿ ಅವರು 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುತ್ತೇವೆ ಎಂದು ಘೋಷಿಸಿದ್ದಾರೆ. ಈ ದೇಶವನ್ನು ಬಾಂಗ್ಲಾದೇಶ, ವಿಯಾಟ್ನಾಂ ಜತೆ ಪೈಪೋಟಿ ನಡೆಸುವ ಹಂತಕ್ಕೆ ಮೋದಿ ತಂದಿದ್ದಾರೆ ಎಂದರು.

ಜೆಡಿಎಸ್​ ಕೇವಲ ಕೃಷಿಕರಿಗಾಗಿ ಇರುವ ಪಕ್ಷವಲ್ಲ. ಕೈಗಾರಿಕೆಗಳ ಅಭಿವೃದ್ಧಿಗೆ ಅನೇಕ ಕೊಡುಗೆ ನೀಡಿದೆ. ಅದರಲ್ಲೂ ಬೆಂಗಳೂರಿನ ಪ್ರಗತಿಗೆ ನಮ್ಮ ಪಕ್ಷದ ಕೊಡುಗೆ ಅಪಾರ. ನಮ್ಮ ಮೆಟ್ರೋ, ಎಲಿವೇಟೆಡ್​ ಕಾರಿಡಾರ್​ನಂತಹ ಅನೇಕ ಯೋಜನೆ ಪ್ರಾರಂಭಿಸಿದ್ದು ನನ್ನ ಸರ್ಕಾರದಲ್ಲಿ. ಬೆಂಗಳೂರಿಗೆ ಕಾವೇರಿ ನೀರು ಸಿಗಲು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಕಾರಣ ಎಂದು ಕುಮಾರಸ್ವಾಮಿ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ 6.5 ಕೋಟಿ ಕನ್ನಡಿಗರ ಭರವಸೆ ಈಡೇರಿಸಿಲ್ಲ. ಬದಲಾಗಿ ಅವರನ್ನು ಸಿಎಂ ಮಾಡಲು ಬೆಂಬಲ ನೀಡಿದ 17 ಶಾಸಕರ ಭರವಸೆ ಮಾತ್ರ ಈಡೇರಿಸಿದ್ದಾರೆ. ಬಿಜೆಪಿ ಪಕ್ಷವು ಎರಡೂ ಕ್ಷೇತ್ರಗಳಲ್ಲಿ ಆರ್ಭಟದ ಪ್ರಚಾರ ನಡೆಸುತ್ತಿದೆ. ಆದರೆ, ಅಲ್ಲಿಗೆ ಬರುತ್ತಿರುವ ಯಾರೂ ಸ್ಥಳೀಯರಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಈಗಾಗಲೇ ಎರಡು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ ಎಂದು ಸಿಎಂ ಹೇಳುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದರು. ರಾಜರಾಜೇಶ್ವರಿ ನಗರದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟು ಪ್ರಾದೇಶಿಕ ಪಕ್ಷಕ್ಕೆ ಅವಕಾಶ ನೀಡುವ ಅಲೆ ಕಾಣುತ್ತಿದೆ ಎಂದರು.

ದಾಸರಹಳ್ಳಿ ಶಾಸಕ ಆರ್​.ಮಂಜುನಾಥ್​ ಮಾತನಾಡಿ, ಬಿಜೆಪಿ ಸರ್ಕಾರ ಯಾವತ್ತಿಗೂ ಸ್ವಂತವಾಗಿ ರಚನೆಯಾಗಿಲ್ಲ. ಬೇರೆ ಪಕ್ಷದ ಶಾಸಕರ ರಾಜೀನಾಮೆ ಕೊಡಿಸಿ ಸರ್ಕಾರ ರಚಿಸಿದ್ದಾರೆ. ಅದರಿಂದ ಮತ್ತೆ ಮತ್ತೆ ಚುನಾವಣೆಗಳು ಬರುತ್ತಿವೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದೆ, ಕರೊನಾ ವೈರಸ್​ನಿಂದ ಜನ ಸಾಯುತ್ತಿದ್ದಾರೆ. ಆದರೆ, ಸರ್ಕಾರಕ್ಕೆ ಮಾತ್ರ ಚುನಾವಣೆ ಮುಖ್ಯವಾಗಿದೆ. ಯಾರಿಗೆ ಬೇಕಿತ್ತು ಈ ಚುನಾವಣೆ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್​ ಸದಸ್ಯ ರಮೇಶ್​ಗೌಡ, ಮಾಜಿ ಸದಸ್ಯ ಟಿ.ಎ.ಶರವಣ, ಪೀಣ್ಯ ಇಂಡಸ್ಟ್ರಿಯಲ್​ ಎಸ್ಟೇಟ್​ನ ಮಾಜಿ ಅಧ್ಯಕ್ಷರಾದ ಲತಾ ಹಾಗೂ ಹುಸ್ಸೇನ್​ ಮತ್ತಿತರ ಉದ್ಯಮಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net