ಈ ಬಾರಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಡಿ.16ರಂದು ನೀವಿರುವಲ್ಲೇ ಹಾರೈಸಿ: ಎಚ್​ಡಿಕೆ

HDK vvani
Published on

ಬೆಂಗಳೂರು: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರ ಜನ್ಮದಿನಕ್ಕೆ ಇನ್ನೆರಡು ದಿನ ಬಾಕಿ ಇದೆ. ಪ್ರತಿ ವರ್ಷ ಡಿ.16 ರಂದು ಎಚ್​ಡಿಕೆ ನಿವಾಸ, ಜೆಡಿಎಸ್​ ಪಕ್ಷದ ಕಚೇರಿ ಬಳಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದರು. ಈ ಭಾರಿ ಆ ಸಡಗರಕ್ಕೆ ಸ್ವತಃ ಕುಮಾರಸ್ವಾಮಿಯೇ ಅವಕಾಶ ಮಾಡಿಕೊಡುತ್ತಿಲ್ಲ.

'ಡಿ.16 ನನ್ನ‌ ಜನ್ಮದಿನ. ಕರೊನಾ ಸಂಕಷ್ಟವು ಜನರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಜನ್ಮದಿನ ಆಚರಿಸದಿರಲು ನಿರ್ಧರಿಸಿದ್ದೇನೆ' ಎಂದು ಟ್ವೀಟ್​ ಮಾಡಿರುವ ಕುಮಾರಸ್ವಾಮಿ, 'ಆ ದಿನ ಬೆಂಗಳೂರಿನಲ್ಲಿ ನಾನು ಲಭ್ಯ ಇರುವುದಿಲ್ಲ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ನೀವಿರುವಲ್ಲಿಂದಲೇ ನನಗೆ ಹಾರೈಸಿ. ನಿಮ್ಮ ಪ್ರೀತಿ ಅಭಿಮಾನ ದೊಡ್ಡದು' ಎಂದಿದ್ದಾರೆ.

'ಪ್ರತಿ ವರ್ಷದ ಜನ್ಮದಿನವೂ ನಮ್ಮ ಇರುವಿಕೆಯನ್ನು ನೆನಪಿಸುತ್ತವೆ ನಿಜ. ಆದರೆ, ಬದುಕಿದ್ದಷ್ಟು ದಿನ ಕಷ್ಟದಲ್ಲಿರುವ ಜನರ ಒಳಿತಿಗೆ ನಿಸ್ವಾರ್ಥವಾಗಿ, ಕಾರುಣ್ಯಭರಿತವಾಗಿ ದುಡಿದಾಗ ನಮ್ಮ‌ ಹುಟ್ಟು ಸಾರ್ಥಕವಾಗುತ್ತದೆ ಎಂಬುದು ನನ್ನ ನಂಬಿಕೆ ಮತ್ತು ನಡೆ' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net