ಐವರು ಸಿಎಂಗಳು ಬದಲಾದರು ಹಾಸನ ಏರ್​ಪೋರ್ಟ್​ ಇನ್ನೂ ಪೂರ್ಣಗೊಂಡಿಲ್ಲ: HD Devegowda ಕಿಡಿ

HD Devegowda
Published on

ನವದೆಹಲಿ: ನಾನು ಪ್ರಧಾನಿ ಸ್ಥಾನದಿಂದ ಕೆಳಗಿಳಿದ ಬಳಿಕ ಕರ್ನಾಟಕದಲ್ಲಿ ಐವರು ಮುಖ್ಯಮಂತ್ರಿಗಳು ಬಂದು ಹೋಗಿದ್ದು, ಈವರೆಗೂ ಹಾಸನ ವಿಮಾನ ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ ಎಂದು ಸಂಸದ (ರಾಜ್ಯಸಭೆ) ಎಚ್​.ಡಿ. ದೇವೇಗೌಡ (HD Devegowda) ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯಸಭೆಯಲ್ಲಿ ಗುರುವಾರ (ಡಿಸೆಂಬರ್​ 05) ನಡೆದ ಭಾರತೀಯ ವಾಯುಯಾನ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ (HD Devegowda), ಹಾಸನಕ್ಕೆ ವಿಮಾನ ನಿಲ್ದಾಣದ ಅಗತ್ಯವಿದ್ದು, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಅದರಿಂದ ಬೇಲೂರು–ಹಳೇಬೀಡು–ಶ್ರವಣಬೆಳಗೊಳ ತಾಣಗಳ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಜಿಲ್ಲೆಯ ಕೃಷಿ ರಫ್ತು ಹೆಚ್ಚಿಸಲು ಸಹಕಾರಿಯಾಗುತ್ತದೆ.

ನಾನು ಪ್ರಧಾನಿಯಾಗಿದ್ದಾಗ ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದೆ. ಆ ಬಳಿಕ ರಾಜ್ಯದಲ್ಲಿ ಐವರು ಮುಖ್ಯಮಂತ್ರಿಗಳು ಬಂದು ಹೋದರೂ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಹಾಸನವು ಶಿಕ್ಷಣ ಸಂಸ್ಥೆ ಹಾಗೂ ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿಯನ್ನು ಹೊಂದಿದೆ. ಈ ಸ್ಥಳವು ಕಾಫಿಗೆ ಹೆಸರುವಾಸಿಯಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ರೈತರು ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ. ವಿದೇಶಿ ವಿನಿಮಯ ಗಳಿಕೆಗೆ ನಗರವು ಗಣನೀಯ ಕೊಡುಗೆ ನೀಡುತ್ತಿದೆ. ರೈತರು ಪ್ರತಿ ತಿಂಗಳು ಹಾಲು ಉತ್ಪಾದನೆಯಿಂದ ₹900 ಕೋಟಿ ಗಳಿಸುತ್ತಾರೆ. 

ಲೋಕಸಭೆ ಮತ್ತು ವಿಧಾನಸಭೆ ಎರಡಕ್ಕೂ ಏಳು ಬಾರಿ ಆಯ್ಕೆಯಾಗಿರುವ ರೈತ ನಾನು. 66 ವರ್ಷಗಳನ್ನು ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದೇನೆ. ಜೀವನದ ಸಂಧ್ಯಾಕಾಲದಲ್ಲಿರುವ ನನ್ನ ಬಹುದೊಡ್ಡ ಬೇಡಿಕೆ ಇದು ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ (HD Devegowda) ರಾಜ್ಯಸಭಾ ಕಲಾಪದಲ್ಲಿ ಮನವಿ ಮಾಡಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net