

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ವಿರುದ್ಧದ ಮುಡಾ ಪ್ರಕರಣದ ಸಮನ್ಸ್ ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಜಾರಿ ನಿರ್ದೇಶನಾಲಯವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, "ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ವಿಷಯದಲ್ಲಿ ರಾಜಕೀಯ ಪ್ರೇರಿತವಾಗಿ ನಡೆದುಕೊಳ್ಳುತ್ತಿದ್ದ ಇಡಿ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಛಾಟಿ ಬೀಸಿದ್ದು, ಚುನಾವಣೆಗಳು ಚುನಾವಣಾ ಕಣದಲ್ಲಿ ನಡೆಯಲಿ, ನೀವು ರಾಜಕೀಯ ದಾಳವಾಗಿ ಬಳಕೆ ಆಗಬೇಡಿ. ನಾವು ಮಾತನಾಡಲು ಆರಂಭಿಸಿದರೆ ಸಂಸ್ಥೆಯ ವಿರುದ್ಧ ಬಹಳ ಕಟುವಾಗಿ ಮಾತನಾಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಇಂತಹ ಘಟನೆಗಳನ್ನು ನಾವು ಕಂಡಿದ್ದೇವೆ. ಇಡಿ ಸಂಸ್ಥೆಯು ದೇಶಾದ್ಯಂತ ಈ ರೀತಿಯ ಕೆಟ್ಟ ಪ್ರವೃತ್ತಿ ಹರಡುವುದನ್ನು ನಾವು ಸಹಿಸುವುದಿಲ್ಲ ಎಂದು ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ" ಎಂದರು.
"ಈ ಮೂಲಕ ಬಿಜೆಪಿಗರು ವಿಪಕ್ಷಗಳನ್ನು ತೇಜೋವಧೆ ಮಾಡಲು ಇಡಿಯಂತಹ ತನಿಖಾ ಸಂಸ್ಥೆಗಳನ್ನು ದಾಳವಾಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದ್ದು, ಇಂತಹ ಹೀನ ರಾಜಕೀಯ ಕೃತ್ಯ ಮಾಡಿದ್ದಕ್ಕಾಗಿ ಅವರು ರಾಜ್ಯದ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಲಿ. ಇನ್ನು ರಾಜಕೀಯದ ಹಿಡಿತಕ್ಕೆ ಒಳಗಾಗದೇ ಸ್ವತಂತ್ರ ತನಿಖಾ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿ ಸಂಸ್ಥೆಗಳ ಘನತೆಯನ್ನು ಮತ್ತು ಅದರ ಮಹತ್ವವನ್ನು ಉಳಿಸಿಕೊಳ್ಳುವ ಕೆಲಸ ಮಾಡಲಿ ಎಂದು ಆಗ್ರಹಿಸುತ್ತೇನೆ" ಎಂದಿದ್ದಾರೆ.
"ದೇಶದ ಸರ್ವೋಚ್ಛ ಅಂಗವಾದ ನ್ಯಾಯಾಂಗವೇ ಇಡಿ ಸಂಸ್ಥೆಯ ಅಧಿಕಾರ ದುರ್ಬಳಕೆ ವಿಷಯದಲ್ಲಿ ದನಿ ಎತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದ್ದು, ಇದನ್ನು ನಾನು ಮನದುಂಬಿ ಸ್ವಾಗತಿಸುತ್ತೇನೆ" ಎಂದು ಸಚಿವರು ಹೇಳಿದ್ದಾರೆ.