ಉತ್ತಮ ಸಾಮಾಜಿಕ ಮೌಲ್ಯ ಅನುಸರಿಸಿ; ಉಜ್ಜಯಿನಿ ಶ್ರೀ ಸಲಹೆ

23-RNR-01
Published on

ಹಾವೇರಿ: ಧರ್ಮ ಎಂಬುದು ಗುಡಿಗೋಪುರದಲ್ಲಿ, ಮಠಮಂದಿರದಲ್ಲಿ ಇಲ್ಲ, ಧರ್ಮ ಎಂಬುದು ಪ್ರತಿ ಜೀವರಾಶಿಯಲ್ಲಿದೆ. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನುಡಿದಂತೆ ನಡೆದರೆ ಅದು ಧರ್ಮವಾಗುತ್ತದೆ. ಉತ್ತಮ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಅನುಸರಿಸುವುದೆ ನಿಜವಾದ ಧರ್ಮ ಎಂದು ಉಜ್ಜಯನಿ ಸಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಉಜ್ಜಯನಿ ಜಗದ್ಗುರುಗಳ ದ್ವಾದಶ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ ಮತ್ತು ಭಾವೈಕ್ಯತಾ ಸಮಾರಂಭದ ಎರಡನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ದಾನಗಳಲ್ಲಿ ಶ್ರೇಷ್ಠವಾದ ದಾನಗಳು ಬಹಳಷ್ಟು ಇವೆ. ಸಂದರ್ಭಾನುಸಾರ ಅದರ ಮಹತ್ವ ಗೊತ್ತಾಗುತ್ತದೆ. ದೇಶ ಕಟ್ಟುವಲ್ಲಿ ಚುನಾವಣೆಗಳು ಪ್ರಮುಖ ಪಾತ್ರವಹಿಸುತ್ತವೆ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡುವುದೆ ಶ್ರೇಷ್ಠ ದಾನವಾಗುತ್ತದೆ. ಹಾಗೇಯೆ ದೇಶದ ಬೆನ್ನೆಲುಬು ರೈತ. ಆತನಿಗೆ ಕನ್ಯಾದಾನ ಮಾಡುವುದೂ ಸಹ ಅತ್ಯಂತ ಶ್ರೇಷ್ಠ ದಾನವಾಗುತ್ತದೆ. ದುಯೋರ್ಧನ ವೀರನಾದರೂ ಪ್ರವೃತ್ತಿಯಲ್ಲಿ ಅಧಮಿರ್ಯಾಗಿದ್ದ. ಕರ್ಣ ದಾನಶೂರನಾಗಿದ್ದರೂ ಅಧರ್ಮದಲ್ಲಿ ಪಾಲುದಾರನಾಗಿದ್ದರಿಂದ ಖಳನಾಯಕನಾದ ಎಂದರು.

ಕೂಡಲದ ಗುರು ನಂಜೇಶ್ವರಮಠದ ಗುರು ಮಹೇಶ್ವರ ಸ್ವಾಮೀಜಿ ಮಾತನಾಡಿ, ಮರಿಕಲ್ಯಾಣ ಖ್ಯಾತಿಯ ಹಾವೇರಿಯು ಕೇವಲ ಯಾಲಕ್ಕಿ ಕಂಪು ಮಾತ್ರವಲ್ಲ ಭಕ್ತಿಯ ಕಂಪಿನ ನಗರವಾಗಿದೆ. ದ್ವಾದಶ ಪಟ್ಟಾಧಿಕಾರ ಮಹೋತ್ಸವದ ಯಶಸ್ಸು ನಗರಕ್ಕೆ ಮತ್ತೊಂದು ಗರಿಯನ್ನು ನೀಡುತ್ತದೆ ಎಂದರು.

ಹರಿಹರದ ವಿಶ್ರಾಂತ ಪ್ರಾಚಾರ್ಯ ಪ್ರೊ. ಎಚ್​.ಎ. ಬಿಕ್ಷಾವತಿರ್ಮಠ ಮಾತನಾಡಿ, ಪಂಚಪೀಠಗಳು ಎಂದಿಗೂ ಬಸವಾದಿ ಶರಣರ ವಿರೋಧಿಗಳಲ್ಲ. ಎರಡೂ ಒಂದೇ. ಕಾಯಕವೇ ಕೈಲಾಸ ಶರಣರ ವಾಣಿಯಾದರೆ, ವೃತ್ತಿ ಚೈತನ್ಯ ಎಂಬುದು ಪಂಚಪೀಠಗಳ ಆಶಯ. ಇದರ ಅರ್ಥವೂ ಒಂದೇ ಆಗಿದೆ. ವೀರಶೈವ ಲಿಂಗಾಯತ ಹೆಸರು ಬೇರೆಯಾದರೂ ಅವುಗಳ ಧರ್ಮ ಚಿಂತನೆ ಒಂದೇ ಆಗಿದೆ. ವೀರಶೈವ ಧರ್ಮವು ಜಗತ್ತಿನ ಎಲ್ಲ ಧರ್ಮಗಳ ಸಾರವನ್ನು ಒಳಗೊಂಡಿರುವ ಹೃದಯ ವೈಶಾಲ್ಯ ಹೊಂದಿದ ಧರ್ಮವಾಗಿದೆ. ಸಾರ್ಥಕ ಬದುಕಿಗೆ ಧರ್ಮದ ಬೆಳಕು ಅತಿ ಅವಶ್ಯವಾಗಿದೆ ಎಂದರು.

ಮಾನಿಹಳ್ಳಿಯ ಡಾ. ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ನೆಗಳೂರಿನ ಗುರುಶಾಂತೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಿರೇಕುರುವತ್ತಿಯ ಸಿದ್ಧನಂದೀಶ್ವರ ಸ್ವಾಮೀಜಿ, ದಿಂಡನಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಪ್ರಮುಖರಾದ ಸಂತೋಷ ಹಿರೇಮಠ, ಮಲ್ಲಿಕಾರ್ಜುನಯ್ಯ ಹಿರೇಮಠ, ಶಿವಯೋಗಿ ಯರೇಶೀಮಿ, ಶಂಭುಲಿಂಗಪ್ಪ ಅಂಗಡಿ, ಉಮೇಶ ಹತ್ತಿಮತ್ತೂರ, ನಾಗರಾಜ ಕುಸನೂರ, ಶಂಭುಲಿಂಗಪ್ಪ ಕೌದಿ, ಕರಬಸನಗೌಡ ಪಾಟೀಲ, ಶಿವಯೋಗಿ ಹೂಲಿಕಂತಿಮಠ ಮತ್ತಿತರರು ಉಪಸ್ಥಿತರಿದ್ದರು.

ರೇಣುಕಾ ಮಡಿವಾಳರ ಪ್ರಾಥಿರ್ಸಿದರು. ವಿರುಪಾಕ್ಷಪ್ಪ ಹತ್ತಿಮತ್ತೂರ ಸ್ವಾಗತಿಸಿದರು. ಶೋಭಾ ಜಾಗಟಗೇರಿ ನಿರೂಪಿಸಿದರು. ತಮ್ಮಣ್ಣ ಮುದ್ದಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net