

ಹಾವೇರಿ: ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೆಯುಐಡಿಎಫ್ಸಿ ಹಾಗೂ ನಗರಸಭೆ ಹಾವೇರಿ ಇವರ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನೆಯನ್ನು ಜವಳಿ, ಕಬ್ಬು, ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನೆರೆವೇರಿಸಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿಮಾರ್ಣವಾದ ಈಜು ಕೋಳ ಹಾಗೂ ಬ್ಯಾಡ್ಮಿಂಟನ್ ಪೋರ್ಟ್ ಉದ್ಘಾಟಿಸಿದರು. ನಂತರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಅಭಿಲೇಖಲಾಯದ ಹಳೆಯ ಕಂದಾಯ ದಾಖಲೆಗಳನ್ನು ಡಿಜಿಟಲಿಕರಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ನಾಗೇಂದ್ರ ಮಟ್ಟಿಯಲ್ಲಿ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಹಂತ- 4ರ ಯೋಜನೆಯಡಿಯಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಹಾಗೆಯೇ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿ ವಿವಿಧ ಬಸ್ಸುಗಳ ಹೊಸ ಸಂಚಾರ ಮಾರ್ಗಗಳಿಗೆ ಚಾಲನೆ ನೀಡಿದರು.
ಶಾಸಕ ಹಾಗೂ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್ಪಿ ಅಂಶು ಕುಮಾರ, ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ, ಉಪ ವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ್ ಶರಣಮ್ಮ ಮತ್ತಿತರರು ಉಪಸ್ಥಿತರಿದ್ದರು.