

ಹಾವೇರಿ: ಶೋಕ ಶೋಕವಾಗಿಯೇ ಉಳಿದರೆ ಸಂಕಟವಾಗುತ್ತದೆ. ಶೋಕ ಸ್ಥಾಯಿ ಭಾವವಾದರೆ ಕರುಳ ರಸವಾಗಿ ರಸಾನಂದ ನೀಡುತ್ತದೆ. ಬದುಕಿನ ಅನುಭವ ಮತ್ತು ಅನುಭೂತಿಯನ್ನು ಗ್ರಹಿಸುವುದೇ ಕಾವ್ಯದ ಲಕ್ಷಣ ಎಂದು ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಹೇಳಿದರು.
ನಗರದ ನೈಸ್ ಅಕಾಡೆಮಿಯಲ್ಲಿ ನಿರಂತರ ಪ್ರಕಾಶನ ಗದಗ ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕವಿ ಹಜರೇಸಾಬ ನದಾಫ್ ಅವರ ಬದುಕು ಛಂದ ಗೀತ ಹಾಗೂ ನಕ್ಷತ್ರ ದಾರಿ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾವನೆಗಳಿಗೆ ಜೀವ ಕೊಡುವ ಕಾರ್ಯ ಮಾಡಿರುವ ಕವಿ ಹಜರೇಸಾಬ ನದಾಫ್ ಅವರ ಕಾವ್ಯಗಳಲ್ಲಿ ಬದುಕಿನ ತಾಕಲಾಟವಿದೆ. ಜಾತಿ ಮತ್ತು ಧರ್ಮಗಳ ಕುರಿತ ವಿಷಾದವಿದೆ ಹಾಗೂ ಸಮಭಾವದ ಹುಡುಕಾಟವಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶಪ್ಪ ಎಚ್. ಮಾತನಾಡಿ, ನಕ್ಷತ್ರ ದಾರಿ ಕವನಗಳಲ್ಲಿ ಮನುಷ್ಯ ಪ್ರೀತಿಯಿದೆ. ಬುದ್ಧಿ ಬೆಳೆಸುವ, ಭಾವ ಉಳಿಸುವ ಕಾರ್ಯ ಮಾಡಿರುವ ಹಜರೇಸಾಬ ನದಾಫ್ ಅವರ ಭಾವನೆಗಳು ಸದಾ ನಮ್ಮ ಜತೆಗಿವೆ ಎಂದರು.
ಗದುಗಿನ ನಿರಂತರ ಪ್ರಕಾಶನದ ಎ.ಎಸ್. ಮಕಾನದಾರ ಮಾತನಾಡಿ, ಸೌಮ್ಯ ಸ್ವಭಾವದ, ಸಾಮರಸ್ಯ ಭಾವದ ಕವಿ ಹಜರೇಸಾಬ ನದಾಫ್ ಅವರು ಆದರ್ಶ ರಾಜ್ಯದ ಅದ್ಭುತ ಕನಸುಗಾರರು. ಬದುಕಿನ ಸ್ತರಗಳಲ್ಲಿ ಎಲ್ಲವನ್ನೂ ಅನುಭವಿಸಿ ಅನುಕರಣೀಯ ವ್ಯಕ್ತಿತ್ವ ಕಟ್ಟಿಕೊಟ್ಟವರು. ಕೊರೊನಾ ಕಾಲಘಟ್ಟದಲ್ಲಿ ನಮ್ಮಿಂದ ಕಣ್ಮರೆಯಾದರೂ ಅವರ ಪತ್ನಿ ಸಬೀನಾಬಾನು ನದಾಫ್ ತಮ್ಮ ಪತಿಯ ಕವನ ಸಂಕಲನಗಳನ್ನು ಬಿಡುಗಡೆ ಮಾಡುವ ಮೂಲಕ ಅವರನ್ನು ಜೀವಂತವಾಗಿಡುವ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಬದುಕು ಛಂದ ಗೀತ ಕವನ ಸಂಕಲನ ಕುರಿತು ಡಾ. ಮಹಾದೇವಿ ಕಣವಿ ಹಾಗೂ ನಕ್ಷತ್ರ ದಾರಿ ಕವನ ಸಂಕಲನ ಕುರಿತು ಡಾ. ಅಂಬಿಕಾ ಹಂಚಾಟೆ ಮಾತನಾಡಿದರು.
ದಾವಣಗೆರೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ. ಶ್ರೀನಿವಾಸ ಅವರಿಗೆ ನಿರಂತರ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ನರಸಿಂಹ ಕೋಮಾರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಹಿರಿಯ ಸಾಹಿತಿ ಸತೀಶ ಕುಲಕಣಿರ್, ಪ್ರಮುಖರಾದ ಶಮಸುನ್ನಿಸಾ ಬೇಗಂ, ಪುಷ್ಪಾ ಶಲವಡಿಮಠ, ಮಾರುತಿ ಶಿಡ್ಲಾಪುರ, ಸಲೀಂ ಜವಳಿ, ಚಂದ್ರಶೇಖರ ಕುಳೇನೂರ, ರವಿ ಹುಚ್ಚಗೊಂಡರ, ಈರಣ್ಣ ಬೆಳವಡಿ, ಸಿ.ಎಸ್. ಮರಳಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.