ಜೀವನದಲ್ಲಿ ಸಂತೋಷ ಎಂಬ ಪ್ರವಚನ ಫೆ. 1ರಂದು

29-RNR-09
Published on

ಹಾವೇರಿ: ಅಂತರಾಷ್ಟ್ರೀಯ ಪ್ರವಚನಕಾರ ಬಿ.ಕೆ. ಶಿವಾನಿ ಮೊದಲ ಬಾರಿಗೆ ಹಾವೇರಿಗೆ ಆಗಮಿಸುತ್ತಿದ್ದು, ಫೆ. 1ರಂದು ಬೆಳಗ್ಗೆ 9.30ಕ್ಕೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ‘ಜೀವನದಲ್ಲಿ ಸಂತೋಷ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಾಖೆಯ ಸಂಚಾಲಕಿ ಲೀಲಾಜಿ ತಿಳಿಸಿದರು.
ಇಲ್ಲಿನ ಈಶ್ವರಿ ವಿಶ್ವವಿದ್ಯಾಲಯ ಶಾಖೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಾನಿ ಅವರು ಒತ್ತಡಮುಕ್ತ ಜೀವನಶೈಲಿ, ನಾಯಕತ್ವ ಕೌಶಲಗಳು, ಭಾವನಾತ್ಮಕ ಬುದ್ಧಿವಂತಿಕೆ, ಸಕಾರಾತ್ಮಕ ಚಿಂತನ ಕಲೆ, ಜೀವನ ಮತ್ತು ಜೀವಂತ ಮೌಲ್ಯಗಳು ಸೇರಿ ಅನೇಕ ವಿಷಯಗಳ ಕುರಿತು ಸರಳವಾಗಿ ಜನರ ಮನಸ್ಸಿಗೆ ತಲುಪುವಂತೆ ಮನವರಿಕೆ ಮಾಡಿಕೊಡಲಿದ್ದಾರೆ.
ಮುನ್ಸಿಪಲ್ ಮೈದಾನದಲ್ಲಿ ನಡೆಯಲಿರುವ ಉಪನ್ಯಾಸಕ್ಕೆ ಉಚಿತ ಪ್ರವೇಶವಿದೆ. 5-6ಸಾವಿರ ಜನ ಸೇರುವ ನಿರೀಕ್ಷೆ ಹೊಂದಿದ್ದು, ಅದಕ್ಕಾಗಿ ಪೆಂಡಾಲ್ ವ್ಯವಸ್ಥೆ ಮಾಡಲಾಗುತ್ತಿದೆ. ವೇದಿಕೆ ಕಾರ್ಯಕ್ರಮ ಇದ್ದರೂ ಅದು ದೀಪಬೆಳಗಲು ಮಾತ್ರ. ಸರಿಯಾಗಿ 9.30ಕ್ಕೆ ಶಿವಾನಿ ಅವರ ಉಪನ್ಯಾಸ ಆರಂಭವಾಗಲಿದ್ದು, ಎರಡು ಗಂಟೆಗಳ ಕಾಲ ಉಪನ್ಯಾಸ ನೀಡಲಿದ್ದಾರೆ ಎಂದರು.
ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ನಿರ್ದೇಶಕ ರಾಜಯೋಗಿ ಬಸವರಾಜ ರಾಜಖುಷಿಗಳು ಸಾನ್ನಿಧ್ಯ ವಹಿಸುವರು. ವಲಯ ಸಂಚಾಲಕಿ ಬ್ರಹ್ಮಕುಮಾರಿ ನಿರ್ಮಲಾಜಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಬ್ರಹ್ಮಕುಮಾರಿಯರಾದ ಕುಷ್ಠಗಿಯ ಲತಾ, ನ್ಯಾಮತಿಯ ವಂದನಾ, ಅನ್ನಪೂರ್ಣ ವೈಶಾಲಿ, ಕಲಾವತಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net