

ಹಾವೇರಿ: ಕೇಂದ್ರ ಸರ್ಕಾರ ಐಸಿಡಿಎಸ್ ಕಾರ್ಯಕ್ರಮವನ್ನು ಪುನರ್ ವಿಮರ್ಶೆ ಮಾಡಬೇಕು. ಬಹಳ ವರ್ಷದ ಕಾರ್ಯಕ್ರಮ ಇದಾಗಿದ್ದು, ಆಡಳಿತಾತ್ಮಕ ಬದಲಾವಣೆ ಹಾಗೂ ಬಜೆಟ್ ಹೆಚ್ಚಳ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ನೂತನ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಅಖಿಲ ಭಾರತ ಕಾಮಿರ್ಕ ಸಂಘಗಳ ಒಕ್ಕೂಟದ ವತಿಯಿಂದ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಗೌರವ ಧನದಲ್ಲಿ ದುಡಿಯುವ ಅಂಗನವಾಡಿ ನೌಕರರ, ಬಿಸಿಯೂಟ ತಯಾರಕರ ಮತ್ತು ಸಂಜೀವಿನಿ ಗ್ರಾಮ ಪಂಚಾಯತಿ ಮಹಿಳಾ ಒಕ್ಕೂಟದ ನೌಕರರ ಸಮಾವೇಶ ಉದ್ಘಾಟಿಸಿ ಅವರ ಮಾತನಾಡಿದರು.
ಸಮಾಜದಲ್ಲಿ ಮಕ್ಕಳು ಹುಟ್ಟುವುದು. ಅಂಗನವಾಡಿಗೆ ಹೋಗುವುದು, ದೊಡ್ಡವರಾಗುವುದು ನಿಲ್ಲುವುದಿಲ್ಲ. ಶಾಲೆ, ಕಾಲೇಜು ಶಿಕ್ಷಣ ಕಲಿಯುತ್ತವೆ. ಮಕ್ಕಳ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರ ಬದುಕು ಹಸನಾಗಬೇಕು. ಸ್ವಾಭಿಮಾನದ ಹಾಗೂ ಸ್ವಾವಲಂಬನೆಯ ಬದುಕು ನಿಮ್ಮದಾಗಬೇಕು. ಆ ನಿಟ್ಟಿನಲ್ಲಿ ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ನಿಮ್ಮ ಒಳ್ಳೆಯತನದಲ್ಲಿ ಮಕ್ಕಳ ಭವಿಷ್ಯ, ಸಮಾಜದ ಭವಿಷ್ಯ, ದೇಶದ ಭವಿಷ್ಯವಿದೆ ಎಂದರು.
ಈ ಸಮಾಜದಲ್ಲಿ ತಾಯಿ ಮಗುವಿನ ಸಂಬಂಧ ಅತ್ಯಂತ ಶೇಷ್ಠ ಸಂಬಂಧ. ಮನುಷ್ಯನ ಜನ್ಮಪೂರ್ವ ಸಂಬಂಧ ತಾಯಿ ಮಗುವಿನ ನಡುವೆ ಮಾತ್ರ ಇರುತ್ತದೆ. ಆ ನಂತರ ತಂದೆ, ಅಣ್ಣ, ಬಂಧು ಬಳಗ ಎಲ್ಲ. ಆ ತಾಯಿ ತನ್ನ ಚಿಕ್ಕ ಮಗುವನ್ನು ಇನ್ನೊಂದು ತಾಯಿಯ ಬಳಿಗೆ ಕಳುಹಿಸುತ್ತಾಳೆ. ಅಂಗನವಾಡಿ ತಾಯಂದಿರು ಎಲ್ಲ ಮಕ್ಕಳನ್ನು ತಮ್ಮ ಮಕ್ಕಳಂತೆ ವಿದ್ಯಾಬುದ್ದಿ ಕೊಟ್ಟು ಕಲಿಸುವ ನೀವು ಶೇಷ್ಠರು ಎಂದರು.
ನಿಮ್ಮ ಮೂರು ದಶಕಗಳ ಸೇವೆಗೆ ಸೂಕ್ತ ಸ್ಥಾನಮಾನ ಹಾಗೂ ಗೌರವವನ್ನು ಕೊಡಲೇಬೇಕಾಗುತ್ತದೆ. ನಿಮ್ಮ ಧ್ವನಿಯಾಗಿ ನಿಮ್ಮ ಸಹೋದರ ಇದ್ದಾನೆ ಎಂದು ತಿಳಿಯಿರಿ. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ. ನೀವು ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಎಂದರು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡರ, ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಹಾಗೂ ವಿವಿಧ ಮಹಿಳಾ ಸಂಟನೆಗಳ ಪದಾಧಿಕಾರಿಗಳು, ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.