ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ

12-RNR-08
Published on

ಹಾವೇರಿ: ಜಗದ್ಗುರು ರೇಣುಕಾಚಾರ್ಯರ ತತ್ವ ದರ್ಶನಗಳು ಎಲ್ಲರಿಗೂ ದಾರಿದೀಪವಾಗಿವೆ. ಮಾನವನ ಜನ್ಮ ಎಲ್ಲ ಜೀವರಾಶಿಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು, 12ನೇ ಶತಮಾನದಲ್ಲಿ ಸಮಾಜ ಸುಧಾರಕರಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಮುಂತಾದ ಶರಣರು ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ್​ ಕೆ. ಶರಣಮ್ಮ ಹೇಳಿದರು.

ನಗರದ ಶ್ರೀ ಜಗದ್ಗುರು ರೇಣುಕಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಜಗದ್ಗುರು ರೇಣುಕಾಚಾರ್ಯರ ಸೇವಾ ಸಮಿತಿ ಇವರ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವನ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಇಂದು ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸುತ್ತಿದ್ದೇವೆ. ಜನರ ವೃತ್ತಿಗೆ ಅನುಗುಣವಾಗಿ ಅಂದರೆ ಕುರಿ ಕಾಯುತ್ತಿದ್ದರೆ ಕುರುಬ, ಆಭರಣ ಮಾಡುತ್ತಿದ್ದರೆ ಅಕ್ಕಸಾಲಿಗ, ಕಾಶಿ ಕೆಲಸ ಮಾಡುತ್ತಿದ್ದರೆ ಕಮ್ಮಾರ ಎಂಬ ವಿವಿಧ ನಾಮದೇಯಗಳಿಂದ ಕರೆಯುತ್ತಿದ್ದರು. ಆದರೆ, ಇಂದು ಆಧುನಿಕ ಯುಗದಲ್ಲಿ ಜಾತಿಯಂಬುವುದು ಒಂದು ಪಿಡುಗಾಗಿ ಬೃಹತ್​ ಹೆಮ್ಮರವಾಗಿ ಬೆಳೆದಿದೆ. ಇಂತಹ ಜಾತಿ ಸಂಕೋಲೆಯಿಂದ ಹೊರಬಂದು ನಾವೇಲ್ಲರೂ ಒಂದಾಗಿ ಒಗ್ಗಟಾಗಿ ಜೀವಿಸಬೇಕಾಗಿದೆ. ಆಗ ಮಾತ್ರ ಸಮಾಜದಲ್ಲಿ ಎಲ್ಲರು ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದರು.

ಕರ್ಜಗಿ ಗುರುಪಾದದೇವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹರಸೂರ ಬಣ್ಣದಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರು ಜಗದ್ಗುರು ರೇಣುಕಾಚಾರ್ಯರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್​ಎಫ್​ಎನ್​ ಗಾಜಿಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್​.ವಿ. ಚಿನ್ನಿಕಟ್ಟಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ರೇಣುಕಾಚಾರ್ಯ ಸೇವಾ ಸಮಿತಿಯ ಅಧ್ಯಕ್ಷ ಕುಮಾರ ಸಾತೇನಹಳ್ಳಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net