ಹಿಂದು, ಸಾಮಾಜಿಕ ಕಾರ್ಯಕರ್ತರ ದ್ವೇಷವೇ ಕಾಂಗ್ರೆಸ್ ಸರ್ಕಾರದ ಪರಮೋದ್ದೇಶ: ಬಿ.ವೈ.ವಿಜಯೇಂದ್ರ ಆಕ್ರೋಶ

B Y Vijayendra
Published on

ಬೆಂಗಳೂರು: ಹಿಂದು ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ದ್ವೇಷಿಸುವುದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಪರಮ ಉದ್ದೇಶವಿದ್ದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಹಿಂದು ಪರ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಈ ಸರ್ಕಾರ ನಿರಂತರವಾಗಿ ಕ್ರೌರ್ಯ ಮೆರೆಯುತ್ತಾ ಬಂದಿದೆ ಎಂದು ಕಿಡಿಕಾರಿದ್ದಾರೆ.

ರಾಜಸ್ಥಾನದಿಂದ ಬೆಂಗಳೂರಿಗೆ ಬರುತ್ತಿದ್ದ ಟನ್ ಗಟ್ಟಲೆ ಅಕ್ರಮ ಮಾಂಸ ರಫ್ತಿನ ಮಾಫಿಯಾ ಚಟುವಟಿಕೆಯ ಮೇಲೆ ಬೆಳಕು ಚೆಲ್ಲಿದ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿ ಅನಾಗರೀಕವಾಗಿ ನಡೆದುಕೊಂಡಿರುವ ಪೊಲೀಸರ ದೌರ್ಜನ್ಯವನ್ನು ರಾಜ್ಯ ಬಿಜೆಪಿ ಬಲವಾಗಿ ಖಂಡಿಸುತ್ತದೆ.

ಪ್ರಶ್ನಿಸಿ, ಹೋರಾಡಿದ್ದೇ ತಪ್ಪು ?

ಜನಜಾಗೃತಿ ಹಾಗೂ ನಾಗರೀಕ ಪ್ರಜ್ಞೆ ಮೆರೆದು ಜನರ ಆರೋಗ್ಯದ ಕಾಳಜಿ ವಹಿಸಿ ಕುರಿ ಮಾಂಸದ ಹೆಸರಿನಲ್ಲಿ ಅನುಮಾನಾಸ್ಪದವಾಗಿ ಬೆಂಗಳೂರಿಗೆ ಸಾಗಿ ಬರುತ್ತಿದ್ದ ಶಂಕಿತ ಮಾಂಸದ ಕುರಿತು ಪ್ರಶ್ನೆ ಮಾಡಿದ್ದಾರೆ.

ಹೋರಾಡಿದ್ದು ತಪ್ಪು ಎಂದು ಪೊಲೀಸರು ಪರಿಗಣಿಸುವುದಾದರೆ, ಇನ್ನು ಮುಂದೆ ಈ ಸರ್ಕಾರದಲ್ಲಿ ಅಕ್ರಮ ಹಾಗೂ ಮಾಫಿಯಾಗಳ ವಿರುದ್ಧ ಹೋರಾಟವನ್ನು ನಡೆಸುವುದು ಕ್ರಿಮಿನಲ್ ಅಪರಾಧವಾಗುತ್ತದೆ ಎಂಬ ಸಂದೇಶವನ್ನು ಪೊಲೀಸರು ರವಾನಿಸಿದ್ದಾರೆ.

ಜನರ ಆರೋಗ್ಯದ ಕಾಳಜಿಗಾಗಿ ಪ್ರಾಮಾಣಿಕವಾಗಿ ದನಿಯೆತ್ತಿದ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿ ಅನಾಗರಿಕವಾಗಿ ವರ್ತಿಸಿರುವ ಪೊಲೀಸರ ನಡವಳಿಕೆ ಬ್ರಿಟಿಷರ ಕಾಲದ ದಮನಕಾರಿ ಧೋರಣೆಯನ್ನು ಪ್ರತಿಬಿಂಬಿಸಿದೆ. ಪೊಲೀಸರ ಕ್ರೌರ್ಯ ಹಾಗೂ ಅಟ್ಟಹಾಸವನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net