ಮದುವೆಯಾಗಲು ಒಪ್ಪದ ಅತ್ತೆ ಮಗಳನ್ನು ಕಿಡ್ನಾಪ್​ ಮಾಡಿ ಕಾರಿನಲ್ಲೇ ತಾಳಿ ಕಟ್ಟಲು ಯತ್ನಿಸಿದ ಯುವಕ: ಮುಂದೇನಾಯಿತು?

Forced MArriage
Published on

ಹಾಸನ: ತನ್ನನ್ನು ಮದುವೆಯಾಗಲು ಒಪ್ಪದ ಅತ್ತೆಮಗಳು ಬಸ್​ಗಾಗಿ ಕಾಯುತ್ತಿದ್ದಾಗ ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದು ಅಪಹರಿಸಿ ಬಲವಂತಾವಾಗಿ ಕಾರಿನಲ್ಲೇ ತಾಳಿಕಟ್ಟಲು ಯತ್ನಿಸಿದೆ ಘಟನೆ ಹಾಸನದಲ್ಲಿ ನಡೆದಿದೆ. ತಾನೇನೋ ಘನಂದಾರಿ ಕೆಲಸ ಮಾಡಿದವನಂತೆ ಮೊಬೈಲ್​ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದಾನೆ.

ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದ ಮನು(30) ಎಂಬುವನೇ ಈ ಕೃತ್ಯ ಎಸಗಿದ ಆರೋಪಿ. ಅಪಹರಣಕ್ಕೆ ಒಳಗಾದ ಯುವತಿಯು ಆರೋಪಿ ಮನುಗೆ ವರಸೆಯಲ್ಲಿ ಅತ್ತೆಯ ಮಗಳು. ಮನು ತನ್ನ ಅತ್ತೆಮಗಳನ್ನು ಮದುವೆಯಾಗಲು ಬಯಸಿದ್ದ. ಆದರೆ, ಯುವತಿ ಪಾಲಕರು ಈ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಇದೇ ಕಾರಣಕ್ಕೆ ಯುವತಿಯನ್ನು ಮನು, ತನ್ನ ಮೂವರು ಗೆಳೆಯರ ಸಹಾಯ ಪಡೆದು ಎರಡು ದಿನದ ಹಿಂದೆ ಕಾರಿನಲ್ಲಿ ಬಂದು ಅಪಹರಿಸಿದ್ದಾನೆ. ಕಾರಿನೊಳಗೇ ಬಲವಂತವಾಗಿ ತಾಳಿಕಟ್ಟಲು ಯತ್ನಿಸಿದ್ದಾನೆ. ಈ ಸಮಯದಲ್ಲಿ ಯುವತಿ ವಿರೋಧಿಸಿದಾಗ ಮನುವಿನ ಗೆಳೆಯರಾದ ವಿನಯ್ ಹಾಗೂ ಪ್ರವೀಣ್ ವಿರೋಧ ಒಡ್ಡದಂತೆ ಬಿಗಿಯಾಗಿ ಹಿಡಿದುಕೊಂಡಿದ್ದರು.

ಈ ಎಲ್ಲ ರಾದ್ಧಾಂತದ ವಿಡಿಯೋ ವೈರಲ್ ಆದ ಕೂಡಲೇ ಹಾಸನ ಪೊಲೀಸ್ ವಿಶೇಷ ತಂಡ ಮಾಡಿಕೊಂಡು ಕಾರ್ಯಚರಣೆಗೆ ಇಳಿದರು. ಆರೋಪಿ ಮನು ತಂಡ ರಾಮನಗರದಲ್ಲಿದ್ದಾರೆಂಬುದನ್ನು ಪತ್ತೆ ಹಚ್ಚಿದ ನಂತರ ಪ್ರಕರಣದ ಆರೋಪಿ ಮನು ಸೇರಿದಂತೆ ವಿನಯ್, ಪ್ರವೀಣ್ ಹಾಗೂ ಕಾರು ಚಾಲಕ ಸಂದೀಪರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದಿಂದ ಬೇಸತ್ತ ಯುವತಿ ತಂದೆ, ಇದೇ ಕೊರಗಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದು, ಯಾವುದೇ ಪ್ರಾಣಾಪಾಯವಿಲ್ಲದೇ ಬದುಕುಳಿದಿದ್ದಾರೆ. ಈ ಸಂಬಂಧ ಕಿಡ್ನಾಪ್ ಕೇಸ್ ದಾಖಲಾಗಿದ್ದು, ಮುಂದೆ ವಿಡಿಯೋ ಹಾಗೂ ಯುವತಿ ಹೇಳಿಕೆ ಆಧರಿಸಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುತ್ತೇವೆ ಎಂದು ಹಾಸನ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net