ಹಾಸನ ಡಿಎಫ್ಒ ನಿಯೋಜನೆ; ಕುಮಾರಸ್ವಾಮಿ ವಿರುದ್ಧ ಈಶ್ವರ ಖಂಡ್ರೆ ಆಕ್ರೋಶ

State 5 Eshwar Khandre
Published on

ಬೆಂಗಳೂರು: ಹಾಸನ ಹಾಸನ ಡಿಎಫ್ಒ ನಿಯೋಜನೆಗೆ 1 ಕೋಟಿ ಡಿಮ್ಯಾಂಡ್ ಮಾಡಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪ ಕಪೋಲ ಕಲ್ಪಿತ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ನಾಲ್ಕು ದಿನಗಳ ಹಿಂದೆ ಸುದ್ದಿಗೋಷ್ಠಿ ಮಾಡಿ ಹಾಸನದ ಡಿಸಿಎಫ್ ಮೋಹನ್ ಕುಮಾರ್ ಪ್ರಾಮಾಣಿಕ ಅಧಿಕಾರಿ ಅವರನ್ನು ಅಮಾನತು ಮಾಡಿದ್ದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಅವರೇ ಅದೇ ಡಿಸಿಎಫ್ 50 ಲಕ್ಷ ರೂ. ನೀಡಿ ಹಾಸನ ಪೋಸ್ಟಿಂಗ್ ಪಡೆದಿದ್ದಾರೆ ಎನ್ನುತ್ತಾರೆ. 50 ಲಕ್ಷ ಲಂಚ ಕೊಟ್ಟು ಪೋಸ್ಟಿಂಗ್ ಪಡೆದಿದ್ದೇ ನಿಜವಾದರೆ ಅವರು ಪ್ರಾಮಾಣಿಕ ಹೇಗೆ ಆಗುತ್ತಾರೆ? ಎಂದು ಪ್ರಶ್ನಿಸಿರುವ ಖಂಡ್ರೆ, ಇದು ಕುಮಾರಸ್ವಾಮಿ ಅವರ ಕಪೋಲ ಕಲ್ಪಿತ ದ್ವಂದ್ವ ಹೇಳಿಕೆಗೆ ಜ್ವಲಂತ ಸಾಕ್ಷಿ ಎಂದು ತಿರುಗೇಟು ನೀಡಿದ್ದಾರೆ.

ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ನೂರಾರು ಮರಗಳನ್ನು ಅಕ್ರಮವಾಗಿ ಕಡಿಯುತ್ತಿದ್ದರೆ, ಅರಣ್ಯ ನಾಶ ಮಾಡುತ್ತಿದ್ದರೆ ಸಹಜವಾಗೇ ವನ್ಯಜೀವಿಗಳು ನಾಡಿಗೆ ಬರುತ್ತವೆ. ಪರಿಸರ ಕಾಳಜಿ ಇರುವ ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯಲ್ಲಿ ಅದರಲ್ಲೂ ಬೇಲೂರು, ಸಕಲೇಶಪುರ ವಲಯದಲ್ಲಿ ಅರಣ್ಯ ಒತ್ತುವರಿ ತೆರವು ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸುವ ಬಗ್ಗೆ ಮಾತನಾಡಬೇಕು ಎಂದು ಹೇಳಿದ್ದಾರೆ.

ಹಾಸನದ ಡಿ.ಸಿ.ಎ್. ಹೊಣೆಯನ್ನು ಮೈಸೂರಿನವರಿಗೆ ಪ್ರಭಾರ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಭಾರಿ ಇದ್ದವರನ್ನೇ ಹಾಸನ ಡಿಸಿಎಫ್ ಆಗಿ ವರ್ಗಾವಣೆ ಮಾಡಲಾಗಿದೆ. ಜತೆಗೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನೂ ಪುನಾರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ರಮವಾಗಿ ಮರ ಕಡಿಯುವ, ಪ್ರಕೃತಿ, ಪರಿಸರ ನಾಶ ಮಾಡುವವರ ಪರವಾಗಿ ಯಾರೂ ಮಾತನಾಡಬಾರದು, ಮಾಜಿ ಮುಖ್ಯಮಂತ್ರಿ ನಂದಗೋಡನ ಹಳ್ಳಿಯ ಅಕ್ರಮ ಮರ ಕಡಿತಲೆ ಪ್ರಕರಣದಲ್ಲಿ ಪದೇ ಪದೇ ಮಾತನಾಡುತ್ತಿರುವುದು ದುರದೃಷ್ಟಕರ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net