ಪ್ರಗತಿಪರರಿಂದ ಹಾಸನ ಚಲೋ ಮೇ 30ಕ್ಕೆ

sripal
ಕೆ.ಪಿ.ಶ್ರೀಪಾಲ, ವಕೀಲ
Published on

ಶಿವಮೊಗ್ಗ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಮೇ 30ರಂದು ನಮ್ಮ ನಡೆ-ಹಾಸನದ ಕಡೆ ಎಂಬ ಘೋಷಣೆಯಡಿ ಹಾಸನ ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನೆ ಸಂಚಾಲಕ ಕೆ.ಪಿ.ಶ್ರೀಪಾಲ್ ತಿಳಿಸಿದರು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದು, ತಿಂಗಳಾದರೂ ಅವರನ್ನು ಸರ್ಕಾರ ಬಂಧಿಸದೇ ಇರುವುದನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ ಮಹಾರಾಜ ಪಾರ್ಕ್‌ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು ಎಂದರು.
ಪ್ರಗತಿಪರರಾದ ಕೆ.ಎಲ್. ಅಶೋಕ್ ಮಾತನಾಡಿ, ಹಾಸನ ಹಲವು ದುರಂತಗಳಿಗೆ ಸಾಕ್ಷಿಯಾಗುತ್ತಿದೆ. ಅವರ ಕುಟುಂಬದ ಅಧಿಕಾರದ ಪಿತ್ತ ನೆತ್ತಿಗೇರಿದೆ. ದೌರ್ಜನ್ಯ, ಅತ್ಯಾಚಾರ, ಹಿಂಸೆ, ಶೋಷಣೆಗಳು ನಡೆಯುತ್ತಿವೆ. ನೂರಾರು ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗಿದ್ದಾರೆ. ಇಡೀ ಘಟನೆಯ ಸುತ್ತ ಯಾರೇ ಇದ್ದರೂ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಹಾಸನ ಚಲೋದಲ್ಲಿ ರೈತ ಸಂಘಟನೆ, ಮಹಿಳಾ ವೇದಿಕೆಗಳು, ವಿವಿಧ ಸಾಹಿತಿಗಳು, ನಿವೃತ್ತ ನ್ಯಾಯಮೂರ್ತಿಗಳು, ಚಿಂತಕರು, ಕನ್ನಡಪರ ಸಂಘಟನೆಗಳ ಸುಮಾರು 10 ಸಾವಿರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಿಸಿಯೂಟ ತಯಾರಕರ ಸಂಘದ ಜಿಲ್ಲಾಧ್ಯಕ್ಷೆ ಹನುಮಕ್ಕ, ಡಿಎಸ್‌ಎಸ್ ಸಂಚಾಲಕ ಹಾಲೇಶಪ್ಪ, ಸಿಐಟಿಯು ಮುಖಂಡರಾದ ನಾರಾಯಣ್, ಪ್ರಭಾಕರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net