Haryana Polls | ಕಾಂಗ್ರೆಸ್​ ಎಂದರೆ ಭ್ರಷ್ಟಾಚಾರ, ಕೋಮುವಾದ; 'ಕೈ' ಪಕ್ಷದ ವಿರುದ್ಧ ಮೋದಿ ವಾಗ್ದಾಳಿ

pm india
Published on

ಚಂಡೀಗಢ: ಅಕ್ಟೋಬರ್ 05 ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಕೊನೆಯ ಕ್ಷಣದ ಕಸರಸ್ತಿನಲ್ಲಿ ರಾಜಕೀಯ ಪಕ್ಷಗಳು ನಿರತವಾಗಿದ್ದು, ಗುರುವಾರ (ಅ.03)ರಂದು ಪ್ರಧಾನಿ ಮೋದಿ ತಮ್ಮ ಎಕ್ಸ್​ ಖಾತೆಯಲ್ಲಿ ಸರಣಿ ಪೋಸ್ಟ್​ ಮೂಲಕ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಚಾರ ಕೊನೆಗೊಳ್ಳುವ ಎರಡು ಗಂಟೆಗೂ ಮೊದಲು 'ಕೈ' ವಿರುದ್ಧ ಕಿಡಿಕಾರಿರುವ ಪ್ರಧಾನಿ ಮೋದಿ, ಕಾಂಗ್ರೆಸ್​ ಭ್ರಷ್ಟಾಚಾರ, ಜಾತಿವಾದ, ಕೋಮುವಾದ ಮತ್ತು ಸ್ವಜನಪಕ್ಷಪಾತದ ಪರವಾಗಿ ನಿಂತಿದೆ ಎಂದು ಹೇಳಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಹರಿಯಾಣದಾದ್ಯಂತ ಓಡಾಡಿದ್ದು ಮತ್ತು ಸಾರ್ವಜನಿಕರ ನಾಡಿಮಿಡಿತ ಅರಿತುಕೊಂಡಿದ್ದೇನೆ. ಮತದಾರರನ್ನು ಭೇಟಿಯಾದ ಬಳಿಕ ಬಿಜೆಪಿ ಸತತ ಮೂರನೇ ಬಾರಿಗೆ ಆಡಳಿತ ನಡೆಸಲಿದೆ ಎನ್ನುವ ವಿಶ್ವಾಸ ಮೂಡಿದೆ. ಮತದಾರರು ಖಂಡಿತವಾಗಿಯೂ ನಮ್ಮ ಕೈ ಹಿಡಿಯಲಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.

2014ರಿಂದ ಆಡಳಿತ ನಡೆಸಿರುವ ಬಿಜೆಪಿ ಹರಿಯಾಣದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದೆ. ಎಲ್ಲಾ ವಿಭಾಗದ ಜನರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್​ ಜನರ ಹಿತವನ್ನು ಕಡೆಗಣಿಸಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಟ್ಟೀಟ್​ನಲ್ಲಿ ಏನು ಬರೆದುಕೊಂಡಿದ್ದಾರೆ ?

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಜಾತೀಯತೆ, ಕೋಮುವಾದ ಮತ್ತು ಸ್ವಜನಪಕ್ಷಪಾತದ ಗ್ಯಾರಂಟಿ ಎಂದು ಹರಿಯಾಣದ ಜನರಿಗೆ ತಿಳಿದಿದೆ. ತಂದೆ ಮತ್ತು ಮಗನ ರಾಜಕೀಯದ ಮೂಲ ಉದ್ದೇಶ ('ಬಾಪು-ಬೇಟೆ ಕಿ ರಾಜನೀತಿ') ಕೇವಲ ಸ್ವಾರ್ಥವಾಗಿದೆ ... ಇಂದು ಜನರು ಹಿಮಾಚಲದಿಂದ ಕರ್ನಾಟಕದವರೆಗೆ ಕಾಂಗ್ರೆಸ್ ಸರ್ಕಾರಗಳ ವೈಫಲ್ಯವನ್ನು ನೋಡಿದ ಕಾಂಗ್ರೆಸ್‌ನ ನೀತಿಗಳು ಜನರನ್ನು ನಾಶಮಾಡುತ್ತವೆ ಮತ್ತು ಅದಕ್ಕಾಗಿಯೇ ಹರಿಯಾಣದ ಜನರು ಪಕ್ಷವನ್ನು ಬಯಸುವುದಿಲ್ಲ, ”ಎಂದು ಅವರು ಹಿಂದಿಯಲ್ಲಿ ಬರೆದಿದ್ದಾರೆ.

ಮೋದಿ ಅವರು ಕಾಂಗ್ರೆಸ್​ ನಾಯಕ ರಾಹುಲ್‌ ಗಾಂಧಿ ಹೆಸರನ್ನು ಉಲ್ಲೇಖಿಸದೇ ಅವರ ವಿರುದ್ದ ವಾಗ್ದಾಳಿ ನಡೆದಿದ್ದಾರೆ. ಕಾಂಗ್ರೆಸ್ ನಾಯಕರು ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಕಳೆದ ತಿಂಗಳು ಅಮೆರಿಕಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ದೇಶದಲ್ಲಿ ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದರು. ಬಳಿಕ ಈ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದರು. ನಾನು ಮೀಸಲಾತಿ ವಿರೋಧಿಯಲ್ಲ, ಈಗ ಮೀಸಲಾತಿಗೆ ಶೇ. 50ರ ಮಿತಿಯಿದ್ದು, ಈ ಮಿತಿಯನ್ನು ಮೀರಿ ಮೀಸಲಾತಿ ಹೆಚ್ಚಿಸುವುದು ಕಾಂಗ್ರೆಸ್ ನ ಉದ್ದೇಶವಾಗಿದೆ ಎಂದು ಸ್ಪಷ್ಟೀಕರಣವನ್ನು ನೀಡಿದ್ದರು.

ಕಾಂಗ್ರೆಸ್ ಎಂದಿಗೂ ಭಾರತವನ್ನು ಬಲಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, “ಇಂದು ಇಡೀ ವಿಶ್ವದ ಕಣ್ಣುಗಳು ಭಾರತದ ಮೇಲೆ ಇವೆ. ಜಗತ್ತು ಸಾಕಷ್ಟು ಭರವಸೆ ಮತ್ತು ನಿರೀಕ್ಷೆಯೊಂದಿಗೆ ಭಾರತದತ್ತ ನೋಡುತ್ತಿದೆ. ಇದರಿಂದ ಹರಿಯಾಣದ ಮತದಾರರು ಮತ್ತೆ ಬಿಜೆಪಿಗೆ ಆಶೀರ್ವಾದ ಮಾಡಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net