ಹರಿಯಾಣ ವಿಧಾನಸಭಾ ಚುನಾವಣೆ: ನಾಮಪತ್ರ ಸಲ್ಲಿಸಿದ ಕುಸ್ತಿಪಟು ವಿನೇಶ್ ಫೋಗೇಟ್

vinesh
Published on

ಜಿಂದ್ (ಹರಿಯಾಣ): ಜುಲಾನಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕುಸ್ತಿಪಟು ವಿನೇಶ್ ಫೋಗೇಟ್ ಬುಧವಾರ ನಾಮಪತ್ರ ಸಲ್ಲಿಸಿದರು.

ವಿನೇಶ್​ ಅವರೊಂದಿಗೆ ಕಾಂಗ್ರೆಸ್ ನಾಯಕ ಮತ್ತು ರೋಹ್ಟಕ್ ಸಂಸದ ದೀಪೇಂದರ್ ಸಿಂಗ್ ಹೂಡಾ ಮತ್ತು ಸೋನಿಪತ್ ಸಂಸದ ಸತ್ಪಾಲ್ ಬ್ರಹ್ಮಚಾರಿ ಇದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ, ನಾನು ರಾಜಕೀಯಕ್ಕೆ ಬರುತ್ತಿರುವುದು ನನ್ನ ಅದೃಷ್ಟ. ನಾವು ಪ್ರತಿಯೊಂದು ವರ್ಗದ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ. ಜುಲಾನಾ ಜನರು ನನಗೆ ನೀಡುತ್ತಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಗೆಲುವು ಖಚಿತ ಎಂದು ವಿನೇಶ್​ ಫೋಗಟ್ ಹೇಳಿದರು.

ಸಂಸದ ದೀಪೇಂದರ್ ಹೂಡಾ ಮಾತನಾಡಿ, ಫೋಗಟ್ ಪಕ್ಷಕ್ಕೆ "ದೊಡ್ಡ ಗೆಲುವು" ನೀಡಲಿದ್ದಾರೆ ಮತ್ತು ಜುಲಾನಾದಲ್ಲಿ ಮಾತ್ರವಲ್ಲ, ಭೂಪಿಂದರ್ ಸಿಂಗ್ ಹೂಡಾ ನೇತೃತ್ವದಲ್ಲಿ ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿಯ ಕುಸ್ತಿ ಪಂದ್ಯದಲ್ಲಿ ಬರೀ ನೂರು ಗ್ರಾಂ ತೂಕ ಹೆಚ್ಚಾದ ಕಾರಣ ಅನರ್ಹಗೊಂಡ ವಿನೇಶ್ ಫೋಗಟ್ ಅದಾದ ಬಳಿಕ ನಿವೃತ್ತಿಯನ್ನು ಘೋಷಿಸಿದ್ದಾರೆ. ಫೋಗಟ್ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಹರಿಯಾಣದ ಕಾಂಗ್ರೆಸ್ ಟಿಕೆಟ್ ಅವರಿಗೆ ಲಭಿಸಿದೆ.

ವಿನೇಶ್ ವಿರುದ್ಧ ಜುಲಾನಾ ಕ್ಷೇತ್ರದಿಂದ ಕ್ಯಾ. ಯೋಗೇಶ್‌ ಬೈರಾಗಿ ಅವರನ್ನು ಕಣಕ್ಕಿಳಿಸಿದೆ. ಎಎಪಿ ಕುಸ್ತಿಪಟು ಕವಿತಾ ದಲಾಲ್ ಅವರನ್ನು ಫೋಗಟ್ ವಿರುದ್ಧ ನಿಲ್ಲಿಸಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ, ಅಕ್ಟೋಬರ್ 8ಕ್ಕೆ ಮತ ಎಣಿಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net