

ರಾಣೆಬೆನ್ನೂರ: ನಗರದ ಬೈಕ್ ಹಾಗೂ ಕಾರುಗಳನ್ನು ಮೋಡಿಫೈ ಮಾಡಿ ಕರ್ಕಶ ಸೌಂಡ್ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮಾತನಾಡಿ, ನಗರದ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ಆಸ್ಪತ್ರೆ, ಶಾಲಾ-ಕಾಲೇಜ್, ದೇವಸ್ಥಾನಗಳಿವೆ. ಈ ಭಾಗದಲ್ಲಿ ಕೆಲ ಕಿಡಿಗೇಡಿಗಳು ತಮ್ಮ ಬೈಕ್‌ನಿಂದ ಕರ್ಕಶವಾದ ಶಬ್ದ ಮಾಡುತ್ತ ಓಡಾಡುತ್ತಿದ್ದಾರೆ. ಇದರಿಂದ ರೋಗಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.
ಇನ್ನೂ ಕೆಲವರು ಬೈಕ್‌ನ ಸೈಲೆನ್ಸರ್ ತೆಗೆದು ಓಡಾಡುತ್ತಿರುವ ಕಾರಣ ವಿಪರೀತ ಸೌಂಡ್ ಹೊರ ಸುಸೂತ್ತಿದೆ. ಇಂಥವರ ವಿರುದ್ಧ ಸಂಚಾರ ಠಾಣೆ ಹಾಗೂ ಶಹರ ಠಾಣೆ ಪೊಲೀಸರಿಗೆ ಸೂಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೇವಲ ದಂಡ ಹಾಕುವ ಬದಲು ಬೈಕ್‌ಗಳನ್ನು ಸೀಜ್ ಮಾಡಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಕೃಷ್ಣಮೂರ್ತಿ ಲಮಾಣಿ, ಹನುಮಂತಪ್ಪ ಕಬ್ಬಾರ, ಮಾರುತಿ ಎನ್., ಮಲ್ಲಣ್ಣ ಅಂಗಡಿ, ಗದಿಗೆಪ್ಪ ಹೊಟ್ಟೆಗೌಡ್ರ ಮತ್ತಿತರರು ಇದ್ದರು.