ನ್ಯಾಯಕ್ಕಾಗಿ ಆಗ್ರಹಿಸಿ ಹಾರೋಗೊಪ್ಪ ಗ್ರಾಮಸ್ಥರ ಪ್ರತಿಭಟನೆ

oplus_2
oplus_2
Published on
ರಾಣೆಬೆನ್ನೂರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಾಣೆಬೆನ್ನೂರ&ಹೊಸನಗರ ಹೆದ್ದಾರಿ ನಿರ್ಮಾಣದಲ್ಲಿ ಗ್ರಾಮಸ್ಥರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕಿನ ಹಾರೋಗೊಪ್ಪ ಗ್ರಾಮಸ್ಥರು ಗುರುವಾರ ಹೆದ್ದಾರಿ ರಸ್ತೆಯ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.

ಗ್ರಾಮಸ್ಥ ಕ್ಕೀರಪ್ಪ ಚೌಡಣ್ಣನವರ ಮಾತನಾಡಿ, ಗ್ರಾಮದಲ್ಲಿ ಹಾಯ್ದು ಹೋಗಿರುವ ರಾಣೆಬೆನ್ನೂರ&ಹೊಸನಗರ&ಬೈಂದೂರು ಹೆದ್ದಾರಿ ನಿರ್ಮಾಣಕ್ಕಾಗಿ ಸರ್ಕಾರಿ ರಸ್ತೆಯಿದ್ದರೂ ಅಕ್ಕಪಕ್ಕದ ನಿವಾಸಿಗಳ 14 ಗುಂಟೆ ಜಾಗವನ್ನು ಭೂ ಸ್ವಾಧಿನ ಪಡಿಸಿಕೊಂಡು ರಸ್ತೆ ಮಾಡುತ್ತಿದ್ದಾರೆ. ರಸ್ತೆಗೆ ಹೊಂದಿಕೊಂಡಿರುವ ಜಾಗಗಳಿಗೆ 5 ಲಕ್ಷ ರೂ.ಗೆ ಒಂದು ಗುಂಟೆಯಂತೆ ಬೆಲೆಯಿದೆ. ಆದರೆ, ಸರ್ಕಾರದಿಂದ 70 ಸಾವಿರ ರೂ. ಭೂ ಸ್ವಾಧಿನ ಪಡಿಸಿಕೊಳ್ಳಲಾಗಿದೆ. ಇದರಿಂದ ನಮಗೆ ಅನ್ಯಾಯ ಮಾಡಿದಂತಾಗಿದೆ. ಅಲ್ಲದೆ ಗುತ್ತಿಗೆದಾರರು ರಸ್ತೆ ನಿರ್ಮಾಣಕ್ಕಾಗಿ ಸರ್ಕಾರದ ಜಾಗವಿದ್ದರೂ ಅದನ್ನು ಬಿಟ್ಟು ಗ್ರಾಮಸ್ಥರ ಖಾಸಗಿ ಜಾಗ ಗುರುತಿಸಿರುವುದು ಸರಿಯಲ್ಲ. ಅಲ್ಲದೆ ಸರ್ಕಾರಿ ಜಾಗ ಬಿಟ್ಟು ಖಾಸಗಿ ಜಾಗ ಸ್ವಾಧಿನ ಪಡಿಸಿಕೊಂಡು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಯವರು ಕೂಡಲೇ ಸ್ಥಳಕ್ಕೆ ಬಂದು ನಮಗೆ ಅನ್ಯಾಯ ಒದಗಿಸಿಕೊಡಬೇಕು. ಸ್ವಾಧಿನ ಪಡಿಸಿಕೊಂಡ ನಮ್ಮ ಜಾಗ ವಾಪಸ್​ ಕೊಡಬೇಕು. ಖಾಸಗಿ ಜಾಗ ಬಿಟ್ಟು ಸರ್ಕಾರಿ ಜಾಗದಲ್ಲಿಯೆ ರಸ್ತೆ ನಿಮಿರ್ಸಬೇಕು. ಇಲ್ಲವೇ ನಮಗೆ ಗುಂಟೆಗೆ 5 ಲಕ್ಷ ರೂ.ನಂತೆ ಪರಿಹಾರ ಒದಗಿಸಿಕೊಡಬೇಕು. ಅಲ್ಲಿಯವರೆಗೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮಾತನಾಡಿ, ಸರ್ಕಾರಿ ಭೂ ಸ್ವಾಧಿನ ಪಡಿಸಿಕೊಂಡ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲು ಸೂಚಿಸಿದೆ. ಅದರಂತೆ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದಾರೆ. ಜಾಗದ ಮಾಲೀಕರಿಗೆ ಪರಿಹಾರ ಕಡಿಮೆ ಎನಿಸಿದರೆ ಕೋರ್ಟ್​ ಮೂಲಕ ಹೆಚ್ಚಿನ ಪರಿಹಾರ ಪಡೆದುಕೊಳ್ಳಬೇಕು. ಅಲ್ಲದೆ ಕೋರ್ಟ್​ನಿಂದ ತಡೆಯಾಜ್ಞೆಯಿದ್ದರೆ ಕಾಮಗಾರಿ ನಿಲ್ಲಿಸಬಹುದು. ವಿನಾಕಾರಣ ಕಾಮಗಾರಿ ತಡೆಯಲು ಬರುವುದಿಲ್ಲ. ನೀವು ಜಿಲ್ಲಾಧಿಕಾರಿಯವರ ಬಳಿ ತೆರಳಿ ಸಮಸ್ಯೆ ಹೇಳಿಕೊಂಡು ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು. ಅಲ್ಲದೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರೊಂದಿಗೆ ಮೊಬೈಲ್​ ಮೂಲಕ ಸಂಪಕಿರ್ಸಿ ಗ್ರಾಮಸ್ಥರು ಭೇಟಿಯಾಗಲು ಸಮಯ ಮಾಡಿಕೊಟ್ಟರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಕಂದಾಯ ನಿರೀಕ್ಷಕ ಮಂಜುನಾಥ ಕೆಂಚರೆಡ್ಡಿ, ಗ್ರಾಮಸ್ಥರಾದ ನಾಗರಾಜ ಚೌಡಣ್ಣನವರ, ಮಾರುತಿ ಚೌಡಣ್ಣನವರ, ಭೀಮಪ್ಪ ಬಿಲ್ಲಳ್ಳಿ, ಉಮೇಶ ಎಚ್​., ಹನುಮಂತಪ್ಪ ಚೌಡಣ್ಣನವರ, ಸುರೇಶ ಚೌಡಣ್ಣನವರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net