

ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.
ಶಾಲೆಯ ಮಹತ್ವ ತಿಳಿಸಿದ ಸಂಕಷ್ಟ
ಕರೊನಾ ಸಂಕಷ್ಟದ ಸಂದರ್ಭ ಮನೆಮನೆಗೆ ಪಾಠ ಮಾಡಲು ಹೋದಾಗ ಆದ ಅನುಭವ ಮರೆಯಲಸಾಧ್ಯ. ಕೆಲವೊಮ್ಮೆ ಮನೆಗೆ ಹೋದಾಗ ಮಕ್ಕಳು ಸಿಗಲಿಲ್ಲ. ಮನೆಯಲ್ಲಿದ್ದವರನ್ನು ವಿಚಾರಿಸಿದರೆ ತೋಟ-ಹೊಲಕ್ಕೆ ಹೋಗಿರುವುದಾಗಿ ಹೇಳುತ್ತಿದ್ದರು. ಹೀಗಾಗಿ ಸಂಜೆ 6 ಗಂಟೆ ನಂತರ ಮನೆಗೆ ಹೋದಾಗ ಮಕ್ಕಳು ಸಿಗುತ್ತಿದ್ದರು. ಕೆಲವರಂತೂ ತೋಟದ ವಸ್ತಿಗಳಲ್ಲೇ ವಾಸವಾಗಿದ್ದರು. ಒಂದೇ ಕಡೆ ಕುಳಿತು ಪಾಠ ಮಾಡಲಾಗುತ್ತಿರಲಿಲ್ಲ. ಆದರೂ, 100 ಮಕ್ಕಳಿಗೆ ನಿರಂತರ ಪಾಠ ಮಾಡಿದೆ. ಬೆಳಗ್ಗೆ ಮನೆಗೆಲಸಕ್ಕೆ ಸಂಬಂಧಿತ ಪಠ್ಯದ ಮುದ್ರಣ ಪ್ರತಿ ನೀಡುತ್ತಿದ್ದೆ. ಪಾಲಕರ ಮೊಬೈಲ್ಗಳಿಗೆ ಮನೆಗೆಲಸ ಮತ್ತು ಪರೀಕ್ಷೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಹಾಕುತ್ತಿದ್ದೆ. ಅವರು ತಪ್ಪದೇ ಅವುಗಳನ್ನು ಪಾಲಿಸುತ್ತಿದ್ದರು. ಸರ್ಕಾರಿ ಶಾಲೆ ಮಕ್ಕಳ ಮನೆಗೆ ಪಾಠ ಮಾಡಲು ಹೋದರೆ ಖಾಸಗಿ ಶಾಲೆ ಮಕ್ಕಳೂ ಬರುತ್ತಿದ್ದರು. ಪರಿಣಾಮ ಇಂದು ಶಾಲೆ ದಾಖಲಾತಿ ಸಹ ಏರಿದೆ. ಶತಮಾನ ಕಂಡ ಶಾಲೆ ದುರಸ್ತಿಗೆ ಪಾಲಕರು ಮುಂದೆ ಬಂದಿದ್ದಾರೆ. ಇದಕ್ಕಿಂತ ಸಂತೃಪ್ತಿ ಇನ್ನೇನಿದೆ ಹೇಳಿ?!
| ಹಣಮಂತ ಕಾತರಕಿ ಶಿಕ್ಷಕ, ಕೆಂಗಲಗುತ್ತಿ, ವಿಜಯಪುರ