ರೈತರಿಗೆ ತೊಂದರೆ ಕೊಟ್ಟರೆ ಸಹಿಸಲ್ಲ: ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೆ.ಎನ್.ರಾಜಣ್ಣ ಎಚ್ಚರಿಕೆ

Harassment to farmers will not be tolerated: KN Rajanna warns forest department officials
Harassment to farmers will not be tolerated: KN Rajanna warns forest department officials
Published on

ಮಧುಗಿರಿ/ದೊಡ್ಡೇರಿ: ದೊಡ್ಡೇರಿ ಹೋಬಳಿಯ ಎ.ಎಂ.ಕಾವಲ್ನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವಿನಾ ಕಾರಣ ರೈತರಿಗೆ ತೊಂದರೆ ಕೊಡುತ್ತಿದ್ದು, ರೈತರನ್ನು ಒಕ್ಕಲೆಬ್ಬಿಸುತ್ತಿರುವ ಆರೋಪ ಕೇಳಿ ಬರುತ್ತಿದೆ. ತಾಲೂಕಿನ ಯಾವುದೇ ಭಾಗದಲ್ಲಿ ರೈತರಿಗೆ ತೊಂದರೆ ಉಂಟಾದರೆ ರೈತರ ಪರ ನಿಂತು ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಭರವಸೆ ನೀಡಿದರು.

ದೊಡ್ಡೇರಿ ಹೋಬಳಿಯ ಗೂಬಲಗುಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸಿಂಗ್ರಾವತ್ತನಹಳ್ಳಿವರೆಗೆ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿ ನಂತರ ಸಿಂಗ್ರಾವತ್ತನಹಳ್ಳಿಯಲ್ಲಿ ವಿಎಸ್‌ಎಸ್‌ಎನ್ ಗೋದಾಮು ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಎ.ಎಂ.ಕಾವಲ್ನಲ್ಲಿ ಅರಣ್ಯ ಇಲಾಖೆಯವರು ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು. ಬಡವನಹಳ್ಳಿಯಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಿಸಲಾಗುವುದು. ತಾಲೂಕಿನಲ್ಲಿ ಹೆಚ್ಚಿನದಾಗಿ ಹುಣಸೆಹಣ್ಣು ಬೆಳೆಯುತ್ತಿದ್ದು, ದಾಸ್ತಾನು ಸಂಗ್ರಹ ಕೊರತೆಯಿಂದ ಬೇಗನೆ ಹಾಳಾಗುತ್ತಿದೆ.

ಈ ಭಾಗಕ್ಕೆ ಕೋಲ್ಡ್ ಸ್ಟೋರೇಜ್ ಘಟಕ ತರಲಾಗುವುದು ಎಂದರು. ನಾನು ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡಿದ್ದೆ. ತಾಲೂಕಿನ ಪ್ರತೀ ಕುಗ್ರಾಮಕ್ಕೂ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಆದರೆ ಈ ಐದು ವರ್ಷದಲ್ಲಿ ಶಾಸಕರು ಎಷ್ಟು ಮನೆ ತಂದಿದ್ದಾರೆ ಎಂಬುದನ್ನು ನೋಡಿ. 5 ವರ್ಷದಲ್ಲಿ ಮಧುಗಿರಿ ಪಟ್ಟಣದ ರಸ್ತೆಗಳೆಲ್ಲ ಧೂಳು ತುಂಬಿಕೊಂಡಿದ್ದು, ಹದಗೆಟ್ಟು ಹೋಗಿವೆ. ಶಾಸಕರ ಅವಧಿಯ ಆಡಳಿತ ಮತ್ತು ನನ್ನ ಅವಧಿಯ ಆಡಳಿತವನ್ನು ಕ್ಷೇತ್ರದ ಜನತೆ ತುಲನೆ ಮಾಡಬೇಕು ಎಂದರು.

ನಮ್ಮದು ಗಾಂಧೀ ಹಿಂದುತ್ವ : ನಮ್ಮದು ಗಾಂಧಿ ಹಿಂದುತ್ವ. ಬಿಜೆಪಿಯವರದ್ದು ಗೋಡ್ಸೆ ಹಿಂದುತ್ವ. ದೇಶದ ರಕ್ಷಣೆೆ ಗಾಂಧಿ ಹಿಂದುತ್ವದಿಂದ ಸಾಧ್ಯ. ಬಿಜೆಪಿಯವರಿಂದ ಹಿಂದೂ ಸಂಸ್ಕೃತಿಯ ಬಗ್ಗೆ ಪಾಠ ಕೇಳಬೇಕಾಗಿಲ್ಲ ಎಂದು ಕೆ.ಎನ್.ರಾಜಣ್ಣ ಕುಟುಕಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಸಹಕಾರ ಸಂಘಗಳ ಉಪನಿಭಂದಕ ವೆಂಕಟೇಶ್, ಸಹಾಯಕ ಉಪನಿಬಂದಕಸಣ್ಣಪ್ಪಯ್ಯ, ವಿ.ಎಸ್.ಎಸ್.ಎನ್.ಅಧ್ಯಕ್ಷ ಚಿಕ್ಕಿರಣ್ಣ, ನಿರ್ದೇಶಕರಾದ ಬಿ.ನಾಗೇಶಬಾಬು, ಜಿ.ಎನ್.ಮೂರ್ತಿ, ಹನುಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಕೆಪಿಸಿಸಿ ಸದಸ್ಯ ಮಲ್ಲಿಕಾರ್ಜುನಯ್ಯ, ಜಿಪಂ ಮಾಜಿ ಸದಸ್ಯ ಚಿನ್ನಪ್ಪ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನರಸಿಂಹಮುರ್ತಿ, ರಾಮಕ್ರಷ್ಣ ಇದ್ದರು.

ಬೈಕ್ ರ‌್ಯಾಲಿಗೆ ಭರ್ಜರಿ ಬೆಂಬಲ: 

ದೊಡ್ಡೇರಿ ಹೋಬಳಿಯಲ್ಲಿ ಶುಕ್ರವಾರ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಗೆ ಭರ್ಜರಿ ಬೆಂಬಲ ವ್ಯಕ್ತವಾಯಿತು. ಗೂಬಲಗುಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಆರಂಭವಾದ ರ‌್ಯಾಲಿ ಹನುಮನಹಳ್ಳಿ ಗೇಟ್, ಕಾವಣದಾಲ, ಪೂಜಾರಹಳ್ಳಿ, ತಿಮ್ಲಾಪುರ ಗೇಟ್, ಡಿ ಕೈಮರ, ದೊಡ್ಡೇರಿ, ದಂಡಿನ ದಿಬ್ಬ, ಬಡವನಹಳ್ಳಿ, ತಿಪ್ಪನಹಳ್ಳಿ, ಬಳೆಹಳ್ಳಿ, ಜಕ್ಕೇನಹಳ್ಳಿ, ಸಜ್ಜೆ ಹೊಸಹಳ್ಳಿ, ಕಿತ್ತಗಳಿ ಮಾರ್ಗವಾಗಿ ಸಿಂಗ್ರಾವತನಹಳ್ಳಿ ತಲುಪಿತು.

ಹೆದರೋದಿಲ್ಲ: ಜೆಡಿಎಸ್ ಜಾತಿವಾದಿ ಪಕ್ಷ ಅಲ್ಲ. ಕುಟುಂಬವಾದಿಗಳ ಪಕ್ಷ. ಜೆಡಿಎಸ್‌ಗೆ

113 ಸ್ಥಾನ ಬರುವುದಿಲ್ಲ. ಅಷ್ಟು ಸ್ಥಾನಗಳಿಗೆ ಅವರು ಅಭ್ಯರ್ಥಿಗಳನ್ನೇ ಹಾಕುವುದಿಲ್ಲ. ಆದರೂ ನಾನು ಸಿಎಂ ಆಗುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಕಾಂಗ್ರೆಸ್‌ನಿಂದ ದೇವೇಗೌಡರು ಪಿಎಂ ಆದರು. ಕುಮಾರಸ್ವಾಮಿ ಸಿಎಂ ಆದರೂ ಅದನ್ನು ಎಂದಿಗೂ ಅವರು ಸ್ಮರಿಸುವುದಿಲ್ಲ. ಯಾವ ಮನುಷ್ಯನಿಗೆ ಉಪಕಾರ ಸ್ಮರಣೆ ಇರುತ್ತದೋ ಅವರಿಗೆ ಯಶಸ್ಸು ಶ್ರೇಯಸ್ಸು ದೊರೆಯಲಿದೆ. ನನಗೆ ದೇವೇಗೌಡರ ಬಗ್ಗೆ ಉಪಕಾರ ಸ್ಮರಣೆ ಇದೆ. ಕಷ್ಟ ಕಾಲದಲ್ಲಿ ಅವರು ನನಗೆ ಸಹಾಯ ಮಾಡಿದ್ದಾರೆ. ಅವರಿಗೆ ಹೆದರಿ ನಾನು ಈ ಮಾತು ಹೇಳುತ್ತಿಲ್ಲ. ಹೆದರಿಕೆ ನನ್ನ ಜೀವನದಲ್ಲೇ ಇಲ್ಲ ಎಂದು ಕೆ.ಎನ್.ರಾಜಣ್ಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net