ಯುವಕನಿಂದ ಮಹಿಳೆಗೆ ಕಿರುಕುಳ ಆರೋಪ, ತಿಂಗಳಾಡಿಯಲ್ಲಿ ನೂರಾರು ಹಿಂದು ಕಾರ್ಯಕರ್ತರ ಜಮಾವಣೆ

rape
ಸಾಂದರ್ಭಿಕ ಚಿತ್ರ
Published on

ಈಶ್ವರಮಂಗಲ(ಪುತ್ತೂರು): ಖರೀದಿಗೆಂದು ಬುಧವಾರ ಸಾಯಂಕಾಲ ತಿಂಗಳಾಡಿಯ ಅಂಗಡಿಗೆ ಬಂದ ಮಹಿಳೆಗೆ ಕೆಲಸಕ್ಕಿದ್ದ ಯುವಕ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಆರೋಪ ಕೇಳಿಬಂದಿದೆ. ಸುದ್ದಿ ತಿಳಿದು ನೂರಾರು ಹಿಂದು ಸಂಘಟನೆ ಕಾರ್ಯಕರ್ತರು ಜಮಾಯಿಸಿ ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಸರ್ವೇ ಗ್ರಾಮದ ನೇರೋಳ್ತಡ್ಕದ ಮಹಿಳೆ ತಿಂಗಳಾಡಿಯ ಸೂಪರ್ ಬಜಾರ್ ಹೆಸರಿನ ಅಂಗಡಿಗೆ ಖರೀದಿಗೆ ಬಂದಿದ್ದರು. ಮಾಲೀಕ ಹಮೀದ್ ಪಟ್ಟೆ ಚಹಾ ಕುಡಿಯಲೆಂದು ಹೊರಗಡೆ ಹೋಗಿದ್ದ ಸಂದರ್ಭ ಅಂಗಡಿಯಲ್ಲಿದ್ದ ಸೊರಕೆ ಓಲೆಮುಂಡೋವು ಸಮೀಪದ ಬದ್ರುದ್ದೀನ್ ಯಾನೆ ಬದ್ರು ಎಂಬಾತ ಕಿರುಕುಳ ನೀಡಲೆತ್ನಿಸಿದ್ದಾನೆ. ಮಹಿಳೆ ಕೂಗಿಕೊಂಡಾಗ ಜನ ಸೇರಿದ್ದು, ಈ ವೇಳೆ ಆರೋಪಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ವಿಠಲ ರೈ ಮಿತ್ತೋಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಅಶೋಕ್ ತ್ಯಾಗರಾಜನಗರ ಸೇರಿದಂತೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು.

ಕ್ರಮಕ್ಕೆ ಶಾಸಕರ ಸೂಚನೆ: ಘಟನೆಯನ್ನು ಖಂಡಿಸಿದ ಶಾಸಕ ಸಂಜೀವ ಮಠಂದೂರು, ಆರೋಪಿ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಇಂತಹ ಶಕ್ತಿಗಳನ್ನು ಮಟ್ಟಹಾಕುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಆರೋಪಿ ಬಂಧನಕ್ಕೆ ಗಡುವು: ಗುರುವಾರ ಬೆಳಗ್ಗೆ 8 ಗಂಟೆಯೊಳಗೆ ಆರೋಪಿಯನ್ನು ಬಂಧಿಸದಿದ್ದರೆ ತಿಂಗಳಾಡಿ ಪೇಟೆಯನ್ನು ಬಂದ್ ಮಾಡಿ ಉಗ್ರ ರೀತಿಯ ಹೋರಾಟ ನಡೆಸುವುದಾಗಿ ಸ್ಥಳದಲ್ಲಿ ನೆರೆದ ಹಿಂದು ಸಂಘಟನೆ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ. ಸಂಪ್ಯ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net