

ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್ಟಿಒ) ಅಧಿಕಾರೇತರ ಕ್ಲರಿಕಲ್ (ಲಿಪಿಕ) ಸಿಬ್ಬಂದಿಗೆ ವಾರ್ಷಿಕ ವರ್ಗಾವಣೆ ವಸೂಲಿ ಕಿರುಕುಳ ಮತ್ತೆ ಶುರುವಾಗಿದೆ. ನಿಗದಿ ಮಾಡಿರುವಷ್ಟು ಹಣ ಕೊಟ್ಟವರಿಗೆ ಕೇಳಿದಲ್ಲಿಗೆ ನಿಯೋಜನೆ, ಹಣ ಕೊಡಲು ನಿರಾಕರಿಸಿದವರಿಗೆ ಕೆಲಸವೇ ಇಲ್ಲದ ಕಚೇರಿಗಳಿಗೆ ಎತ್ತಂಗಡಿ ಮಾಡುವ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದೆ.
ಹಣ ಹೊಂದಿಸಲು ಸಿಬ್ಬಂದಿ, ಅಡ್ಡದಾರಿ ಹಿಡಿಯುತ್ತಿರುವ ಪರಿಣಾಮವಾಗಿ ಇಲಾಖೆಯಲ್ಲಿ ಹಲವು ಹಗರಣಗಳು ಬೆಳಕಿಗೆ ಬರುತ್ತಿವೆ. ಏತನ್ಮಧ್ಯೆ, ಯಾರೇ ಆದರೂ ಹಣ ಕೇಳಿದರೆ ಕೊಡಬೇಡಿ. ನನ್ನ ಗಮನಕ್ಕೆ ತನ್ನಿ ಎಂದು ಸಾರಿಗೆ ಸಚಿವರು ಕ್ಲರಿಕಲ್ ಸಿಬ್ಬಂದಿಗೆ ಅಭಯ ನೀಡಿದ್ದಾರೆ. ಲಿಪಿಕ ಸಿಬ್ಬಂದಿ ರಕ್ಷಣೆ ಹೆಸರಲ್ಲಿ ಮೋಟಾರು ವಾಹನ ಇಲಾಖಾ ಸಂಘ (ಲಿಪಿಕ) ಅಸ್ತಿತ್ವದಲ್ಲಿದೆ. ಆದರೆ, ಇಲಾಖೆಯ ಬಹುತೇಕ ಲಿಪಿಕ ಸಿಬ್ಬಂದಿಗೆ ಸಂಘದ ಬಗ್ಗೆ ಮಾಹಿತಿಯೇ ಗೊತ್ತಿರಲಿಲ್ಲ. ಈ ಬಗ್ಗೆ ಹಿಂದೆ 'ವಿಜಯವಾಣಿ' ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ನಾಮ್ಕೇವಾಸ್ತೆಗೆ ಎನ್ನುವಂತೆ ಸಂಘದ ನವೀಕರಣಕ್ಕೆ ಚುನಾವಣೆ ನಡೆಸುವುದಾಗಿ 2024ರ ನ.24ರಂದು ದಿನಾಂಕ ಘೋಷಣೆ ಮಾಡಲಾಯಿತು.
ಆದರೆ, ಶಿವಮೊಗ್ಗ ವಿಭಾಗಕ್ಕೆ ಮಾತ್ರವೇ ಚುನಾವಣೆ ನಡೆದು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಬೆಂಗಳೂರು ನಗರ ವಿಭಾಗ ಸೇರಿ ಐದೂ ವಿಭಾಗಗಳಿಗೆ 8 ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಇವರಿಗೆ ವಿಭಾಗವಾರು ವರ್ಗಾವಣೆ ವಸೂಲಿ ಜವಾಬ್ದಾರಿ ಹಂಚಲಾಗಿದೆ.
ನಿಗದಿಪಡಿಸಿರುವಷ್ಟು ಹಣ ಕೊಡಲು ನಿರಾಕರಿಸಿದರೆ ಮುಲಾಜಿಲ್ಲದೆ ಎತ್ತಂಗಡಿ ಮಾಡಲಾಗುತ್ತದೆ. ಹಣ ಕೊಟ್ಟು 6 ತಿಂಗಳು ಕಳೆಯುವಷ್ಟರಲ್ಲೇ ಮತ್ತೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ನಿರಾಕರಿಸಿದ್ದಕ್ಕೆ ಬೀದರ್ ಕಚೇರಿಯಿಂದ ಒಬ್ಬರನ್ನು ಬೆಂಗಳೂರು ಪ್ರಧಾನ ಕಚೇರಿಗೆ, ಇನ್ನೊಬ್ಬರನ್ನು ಮೈಸೂರು ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಮತ್ತೊಬ್ಬರನ್ನು ಚಿಂತಾಮಣಿ ಕಚೇರಿಯಿಂದ ಚಿಕ್ಕಮಗಳೂರಿಗೆ ಡೆಪ್ಯುಟೇಷನ್ ಕಳುಹಿಸಲಾಗಿದೆ. ಇವರ ಸ್ವಂತ ಊರು ಚಿಕ್ಕಬಳ್ಳಾಪುರ. ಹೆಂಡತಿ- ಮಕ್ಕಳನ್ನು ಇಲ್ಲಿ ಬಿಟ್ಟು ದೂರದ ಚಿಕ್ಕಮಗಳೂರಿಗೆ ಹೋಗಿ ಕೆಲಸ ಮಾಡುವುದಾದರೂ ಹೇಗೆ ಎಂದು ಸಿಬ್ಬಂದಿ ಪ್ರಶ್ನಿಸಿದ್ದಾರೆ.
ಇಲಾಖೆಯಲ್ಲಿ ಈಗಾಗಲೇ ಸಿಬ್ಬಂದಿಯ ಕೊರತೆ ಇದೆ. ವರ್ಗಾವಣೆ ಅಥವಾ ಡೆಪ್ಯುಟೇಷನ್ ಹೆಸರಲ್ಲಿ ಯಾರಾದರೂ ಹಣ ಕೇಳಿದರೆ ಕೊಡಬೇಡಿ. ಒಂದು ವೇಳೆ ದುಡ್ಡಿಗಾಗಿ ಬಲವಂತಪಡಿಸಿದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ. ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ. | ರಾಮಲಿಂಗಾರೆಡ್ಡಿ ಸಾರಿಗೆ ಸಚಿವ
ಹಣ ಕೊಡಲು ನಿರಾಕರಿಸಿದರೆ ತಕ್ಷಣ ಬೇರೆಡೆಗೆ ವರ್ಗಾವಣೆ ಮಾಡಲಾಗುತ್ತದೆ. ಅದರ ಜತೆಗೆ ನಿರ್ದಿಷ್ಟ ಸಿಬ್ಬಂದಿಗೆ ಯಾವುದೇ ಡ್ಯೂಟಿ ಕೊಡದಂತೆ ಕಚೇರಿ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಲಾಗುತ್ತದೆ. ಸಿಬ್ಬಂದಿ ಕಚೇರಿಗೆ ಬಂದರೂ ಯಾವುದೇ ಸೆಕ್ಷನ್ನಲ್ಲಿ ಕೆಲಸ ಮಾಡದೆ ಸುಮ್ಮನೆ ಕುಳಿತು ಮನೆಗೆ ಹೋಗುವಂತೆ ಮಾನಸಿಕ ಕಿರುಕುಳ ಕೊಡಲಾಗುತ್ತದೆ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.