ಪಲ್ಟಿ ಹೊಡೆದ ಡೀಸೆಲ್ ಲಾರಿ: ಕೊಡ, ಬಾಟಲಿಗಳಲ್ಲಿ ತುಂಬಿಕೊಂಡ ಜನ, ನಂದಿಬೇವೂರು ತಿರುವಿನಲ್ಲಿ ಘಟನೆ

25062021 Desiel lory accident
Published on

ಹರಪನಹಳ್ಳಿ: ತಾಲೂಕಿನ ನಂದಿಬೇವೂರು ಗ್ರಾಮದ ಬಳಿ ಡೀಸೆಲ್ ತುಂಬಿದ ಲಾರಿ ಶುಕ್ರವಾರ ಬೆಳಗಿನ ಜಾವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಗಾಯಗೊಂಡಿದ್ದಾನೆ. ಗಾಯಾಳುವನ್ನು ಸ್ಥಳೀಯರು ಪಟ್ಟಣದ ಆಸ್ಪತ್ರೆಗೆ ಸೇರಿಸಿದ್ದಾರೆ. ಬಳಿಕ ಜನರು ಲಾರಿಯಿಂದ ಸೋರುತ್ತಿದ್ದ ಡೀಸೆಲ್ ಅನ್ನು ಕೊಡಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದು ಕಂಡುಬಂತು.

ಲಾರಿ ಮಂಗಳೂರಿನಿಂದ ಹರಪನಹಳ್ಳಿ ಮಾರ್ಗವಾಗಿ ಹೊಸಪೇಟೆ ಕಡೆಗೆ ಹೊರಟಿತ್ತು. ನಂದಿಬೇವೂರು ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಪಲ್ಟಿಯಾದ ಲಾರಿಯಿಂದ ಸೋರುತ್ತಿದ್ದ ಡೀಸೆಲ್ ತುಂಬಿಕೊಳ್ಳಲು ಜನ ಪ್ಲಾಸ್ಟಿಕ್ ಚೀಲ, ಕೊಡ, ಕ್ಯಾನ್, ಬಾಟಲಿಗಳೊಂದಿಗೆ ಮುಗಿಬಿದ್ದಿದ್ದರು. ಒಟ್ಟು 6 ಸಾವಿರ ಲಿಟರ್ ಡೀಸೆಲ್ ನಷ್ಟವಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಜನರನ್ನು ಚದುರಿಸಿದ್ದಾರೆ. ಬೆಸ್ಕಾಂ ನೌಕರರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರೆ, ಅಗ್ನಿಶಾಮಕ ದಳ ಸಬ್ಬಂದಿ ಅಗ್ನಿನಿರೋಧಕ ದ್ರಾವಣ ಸಿಂಪಡಿಸಿದ್ದಾರೆ.

ಬೈಪಾಸ್ ರಸ್ತೆಗೆ ಒತ್ತಾಯ: ಬೇವೂರಲ್ಲಿ ರಸ್ತೆ ಹಾದು ಹೋಗಿದ್ದು, ಈ ಮಾರ್ಗದಲ್ಲೇ ಶಾಲೆ, ದೇವಸ್ಥಾನಗಳು ಇವೆ. ರಸ್ತೆಯಲ್ಲಿ ನಾಲ್ಕು ತಿರುವುಗಳಿದ್ದು, ಅನೇಕ ಬಾರಿ ಅಪಘಾತ ಸಂಭವಿಸಿವೆ. ಆದ್ದರಿಂದ ಗ್ರಾಮದ ಹೊರಗೆ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರಾದ ಕೊಟ್ರೇಶ್, ಮಂಜುನಾಥ, ಗಣೇಶ್, ಚನ್ನಪ್ಪ, ಸಿದ್ದೇಶ್, ಮಲ್ಲೇಶ್ ಇತರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net