

ನವದೆಹಲಿ: ಒನ್ ಇಂಡಿಯನ್ ಗರ್ಲ್, ಹಾಫ್ ಗರ್ಲ್ಫ್ರೆಂಡ್, ಗರ್ಲ್ ಇನ್ ರೂಮ್ 105, ವಾಟ್ ಯಂಗ್ ಇಂಡಿಯಾ ವಾಂಟ್ಸ್ ಹೀಗೆ ಹಲವು ಪುಸ್ತಕಗಳನ್ನು ನೀಡಿರುವ ಭಾರತೀಯ ಲೇಖಕ ಚೇತನ್ ಭಗತ್ ಅವರ ಬಗ್ಗೆ ಪುಸ್ತಕ ಪ್ರಿಯರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಭಾರತದ ಪ್ರಸಿದ್ಧ ಮತ್ತು ಯಶಸ್ವಿ ಬರಹಗಾರರಲ್ಲಿ ಚೇತನ್ ಭಗತ್ ಕೂಡ ಒಬ್ಬರು.
ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ಅದರಂತೆ ಇಂದಿನ ಬದಲಾವಣೆಗಳಿಂದ ಎಷ್ಟು ಪ್ರಯೋಜನವಿದೆಯೋ ಅಷ್ಟೆ ಮಾರಕವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಯಾವುದಾದರೂ ವಸ್ತು, ವಿಷಯ ಅಥವಾ ವ್ಯಕ್ತಿ ಇಷ್ಟವಾಗಲಿಲ್ಲ ಎಂದರೆ ಸಾಕು ಸಾಮಾಜಿಕ ಜಾಲತಾಣದಲ್ಲಿ ಅದರ ಬಗ್ಗೆ ಟ್ರೋಲ್‌ಗಳು ಮತ್ತು ನೆಗೆಟಿವ್ ಕಾಮೆಂಟ್ಗಳು ಹರಿದುಬರುತ್ತಿರುತ್ತದೆ. ಈ ಬಗ್ಗೆ ಕೇಳಿದಾಗ ಚೇತನ್ ಭಗತ್ ಅವರು ಹೇಳಿದ್ದು ಮಾತ್ರ ವಿಶೇಷವಾಗಿತ್ತು.
ಇಂಡಿಯಾ ಟುಡೇ ಸಂವಾದದಲ್ಲಿ ಪಾಲ್ಗೊಂಡಿದ್ದ ಚೇತನ್ ಭಗತ್ ಅವರಿಗೆ ಸಾಮಾಜಿಕ ಜಾಲತಾಣದ ಟ್ರೋಲ್‌ಗಳು ಮತ್ತು ನೆಗೆಟಿವ್ ಕಾಮೆಂಟ್ ಬಗ್ಗೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, ಹದಿನೈದು ವರ್ಷಗಳ ಹಿಂದೆ ಈ ಪ್ರಶ್ನೆಯನ್ನು ನೀವು ಕೇಳಿದ್ದರೆ ನನ್ನ ಉತ್ತರ ಹೌದು, ಏಕೆ ಹೀಗೆ, ನನ್ನ ಇಂಗ್ಲಿಷ್ ಚೆನ್ನಾಗಿದೆ ಎಂದು ಇರುತಿತ್ತು. ಆದರೆ ಈಗ ನನಗೆ ಒಂದು ಸಿದ್ಧಾಂತವಿದೆ. ನಾನು ಪಪ್ಪಾಯಿ ಸಿದ್ಧಾಂತವನ್ನು ಫಾಲೋ ಮಾಡುತ್ತೇನೆ ಎಂದು ಹೇಳಿದರು.
ಎಲ್ಲರಿಗೂ ಬಾಳೆಹಣ್ಣು, ಮಾವು ಎಂದರೆ ಇಷ್ಟ. ಆದರೆ ಪಪ್ಪಾಯಿ ಎಂದರೆ ಅನೇಕರು ಇಷ್ಟಪಡುತ್ತಾರೆ ಹಾಗೂ ಕೆಲವರು ಇಷ್ಟಪಡುವುದಿಲ್ಲ. ಇದರಲ್ಲಿ ಪಪ್ಪಾಯಿಯ ತಪ್ಪಿಲ್ಲ. ಯಾರಾದರೂ ಪಪ್ಪಾಯಿಗೆ ಪಪ್ಪಾಯಿಯನ್ನು ಪ್ರೀತಿಸುತ್ತೇನೆ ಎಂದು ಅಥವಾ ನಿನ್ನನ್ನು ದ್ವೇಷಿಸುತ್ತೇನೆ ಎಂದರೆ ಅದು ಏನು ಮಾಡಬೇಕು? ಪಪ್ಪಾಯಿಯಾಗಿರುವುದನ್ನು ದ್ವೇಷಿಸಿ ಬಾಳೆಹಣ್ಣಾಗಲು ಪ್ರಯತ್ನಿಸಿದರೆ ಅವನು ಹಾಳಾಗುತ್ತಾನೆ. ಹಾಗಾಗಿ ನಾನು ಪಪ್ಪಾಯಿ ಆಗಲು ಇಷ್ಟ ಪಡುತ್ತೇನೆ.
ನಿಮಗಿಷ್ಟವಾದರೆ ಸರಿ, ಇಷ್ಟವಿಲ್ಲದಿದ್ದರೆ ಇನ್ನೇನಾದರೂ ಹೇಳಿ. ನಾವೆಲ್ಲರೂ ಪಪ್ಪಾಯಿ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರೂ ನಿಮ್ಮನ್ನು ಇಷ್ಟಪಡುವುದಿಲ್ಲ. ಅದು ಸರಿ, ನೀವು ಯಾಕೆ ಎಲ್ಲರಿಗೂ ಇಷ್ಟವಾಗಬೇಕು? ಎಲ್ಲರಿಗೂ ಇಷ್ಟವಾಗಿಲ್ಲ ಎಂದರೆ ನಾವು ಸಂತೋಷಪಡಬೇಕು ಇಲ್ಲದಿದ್ದರೆ ನಾವೆಲ್ಲರೂ ಬಾಳೆಹಣ್ಣಾಗುತ್ತೇವೆ ಎಂದು ನಾನು ಭಾವಿಸುತ್ತೇನೆ. ದ್ವೇಷಿಸುವ ಹಣ್ಣುಗಳಲ್ಲಿ ಪಪ್ಪಾಯಿ ಒಂದು, ಆದರೆ ಅದು ಅದರದೇ ಆದ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿಸಿದರು.(ಏಜೆನ್ಸೀಸ್)