

ನವದೆಹಲಿ: ಕೆಲದಿನಗಳ ಹಿಂದೆ ಆಂಧ್ರಪ್ರದೇಶದಲ್ಲಿ ಕೆಲ ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಿ ಅರ್ಧ ಗಂಟೆಯಲ್ಲೇ ಮೃತಪಡುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿ ಓದಿದ್ದೆವು. ಆದರೆ, ಇದಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಾಗಿರಲಿಲ್ಲ. ಆದರೀಗ ಅದಕ್ಕೆ ಹ್ಯಾಪಿ ಹೈಪೋಕ್ಸಿಯಾ ಕಾರಣ ಎಂಬುದು ಗೊತ್ತಾಗಿದೆ.
ಹೈಪೋಕ್ಸಿಯಾ ಎಂದರೆ ಏನು? ಹೈಪೋಕ್ಸಿಯಾ ಎಂದರೆ ದೇಹದಲ್ಲಿ ಹರಿಯುತ್ತಿರುವ ರಕ್ತದಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ಆದಾಗ ಸಾಮಾನ್ಯವಾಗಿ ಉಸಿರಾಟದ ಸಮಸ್ಯೆಗಳು ಕಾಣಿಸುತ್ತವೆ.
ಆದರೆ, ಕರೊನಾ ಸೋಂಕಿತರ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿ, ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಿದ್ದರೂ ಉಸಿರಾಟಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕಾಣಿಸುವುದಿಲ್ಲ. ಅವರು ತುಂಬಾ ಆರೋಗ್ಯವಾಗಿರುವಂತೆ, ಚಟುವಟಿಕೆಯಿಂದ ಇರುವಂತೆ ತೋರುತ್ತದೆ. ಅವರು ವೈದ್ಯರು, ಅಕ್ಕಪಕ್ಕದ ರೋಗಿಗಳ ಜತೆ ಸಾಮಾನ್ಯ ದಿನಗಳ ರೀತಿಯಲ್ಲೇ ಮಾತನಾಡುತ್ತಿರುತ್ತಾರೆ. ತಮ್ಮ ಮೊಬೈಲ್ ಫೋನ್ ಅನ್ನು ಬ್ರೌಸ್ ಮಾಡುತ್ತಿರುತ್ತಾರೆ. ಆದರೆ, ಅವರಿಗೆ ಗೊತ್ತಿಲ್ಲದಂತೆ ಅವರ ದೇಹದ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತಿರುತ್ತದೆ. ಇದರಿಂದ ಹಠಾತ್ ಹೃದಯಾಘಾತವಾಗಿ ಅವರು ಸಾಯುತ್ತಿದ್ದಾರೆ.
ರೋಗಿ ಸಾಯುವವರೆಗೂ ಸಾಮಾನ್ಯರಂತೆ ಇರುವುದರಿಂದ ಅವರ ಈ ಸ್ಥಿತಿಗೆ ಹ್ಯಾಪಿ ಹೈಪೋಕ್ಸಿಯಾ ಎಂದು ಕರೆಯಲಾಗುತ್ತದೆ. ಅವರಲ್ಲಿ ಹೈಪೋಕ್ಸಿಯಾ ಉಂಟಾಗಿದೆ ಎಂಬುದು ವೈದ್ಯರಿಗೂ ತಕ್ಷಣವೇ ಗೊತ್ತಾಗುವುದಿಲ್ಲ. ಈ ಸಮಸ್ಯೆ ಇರಬಹುದೇನೋ ಎಂದು ವೈದ್ಯರು ಅಂದಾಜಿಸಿ, ಪರೀಕ್ಷೆಗೆ ಒಳಪಡಿಸಿದಾಗ ಮಾತ್ರವೇ ಆ ರೋಗಿಗೆ ಹೈಪೋಕ್ಸಿಯಾ ಇದೆ ಎಂಬುದು ಸ್ಪಷ್ಟವಾಗುತ್ತದೆ. ಇದುವೇ ಕೋವಿಡ್ ಸೋಂಕಿತರ ಹೆಚ್ಚಿನ ಸಂಖ್ಯೆಯ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.