

ನವದೆಹಲಿ: ಇನ್ಪುಟ್ ವೆಚ್ಚ ಕಡಿತಗೊಳಿಸಲು, ಮೌಲ್ಯವರ್ಧನೆ ಹೆಚ್ಚಿಸಲು, ರಫ್ತು ಸ್ಪರ್ಧಾತ್ಮಕತೆ ಉತ್ತೇಜಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಪೋ›ತ್ಸಾಹಿಸುವ ಸಲುವಾಗಿ ಚಿನ್ನ, ಬೆಳ್ಳಿ, ಪ್ರಮುಖ ಖನಿಜಗಳು, ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಸೀಮಾ ಸುಂಕವನ್ನು ಕೇಂದ್ರ ಕಡಿತಗೊಳಿಸಿದೆ.
ಹಣಕಾಸು ಬಜೆಟ್ನಲ್ಲಿ ಈ ಅಂಶಗಳನ್ನು ಪ್ರಕಟಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಡಲ ಆಹಾರೋತ್ಪನ್ನಗಳಾದ ಸೀಗಡಿ ಮತ್ತು ಸೀಗಡಿ ಆಹಾರ, ಫಿಶ್ ಫೀಡ್, ಲಿಪಿಡ್ ಆಯಿಲ್, ಕ್ಯಾನ್ಸರ್ ಔಷಧ, ಬೆಳ್ಳಿ ಮತ್ತು ಪ್ಲಾಟಿನಂನಂತಹ ಇತರೆ ಅಮೂಲ್ಯ ಲೋಹಗಳು, ಜವಳಿ, ಉಕ್ಕು, ತಾಮ್ರ, ಸರಕುಗಳು, ವೈದ್ಯಕೀಯ ಉಪಕರಣಗಳು ಮತ್ತು ಚರ್ಮ ಉದ್ಯಮದ ವಸ್ತುಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದೆ.
ಬೆಲೆಬಾಳುವ ಲೋಹಗಳ ನಾಣ್ಯಗಳು, ಚಿನ್ನ/ಬೆಳ್ಳಿ ಉತ್ಪನ್ನ ಮತ್ತು ಚಿನ್ನ, ಬೆಳ್ಳಿಯ ಬಾರ್ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 15ರಿಂದ ಶೇಕಡಾ 6ಕ್ಕೆ ಇಳಿಸಲಾಗಿದೆ. ಚಿನ್ನ ಮತ್ತು ಬೆಳ್ಳಿಯ ಗಟ್ಟಿಗಳಿಗೆ ಸುಂಕವನ್ನು ಶೇ. 14.35ರಿಂದ ಶೇ. 5.35 ಕ್ಕೆ ಕಡಿತಗೊಳಿಸಲಾಗಿದೆ. ರಫ್ತು ಮತ್ತು ಉತ್ಪಾದನೆ ಹೆಚ್ಚಿಸಲು ಲೋಹಗಳ ಮೇಲಿನ ಸುಂಕ ಕಡಿತಗೊಳಿಸಬೇಕೆಂದು ರತ್ನ ಮತ್ತು ಆಭರಣ ರಫ್ತುದಾರರು ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಇದನ್ನು ಕೇಂದ್ರ ಪರಿಗಣಿಸಿದ್ದು, ಈ ಕ್ಷೇತ್ರದ ಹಿತ ಕಾಯಲು ಮುಂದಾಗಿದೆ. ಸುಮಾರು ರೂ. 60,000 ಕೋಟಿ ಗೆ ತಲುಪಿರುವ ಸಮುದ್ರಾಹಾರ ರಫ್ತುಗಳ ಉತ್ತೇಜನಕ್ಕೆ ಪಾಲಿಚೇಟ್ ಹುಳುಗಳು, ಸೀಗಡಿ ಮತ್ತು ಮೀನಿನ ಆಹಾರದ ಮೇಲೆ ಸುಂಕ ಕಡಿತವನ್ನು ಶೇಕಡಾ 5ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ ಎಂದ ಸೀತಾರಾಮನ್, ಚರ್ಮ ಮತ್ತು ಜವಳಿ ವಲಯಗಳಲ್ಲಿ ರಫ್ತುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನವದೆಹಲಿ: ಚಿನ್ನ-ಬೆಳ್ಳಿ ಮೇಲಿನ ಸುಂಕವನ್ನು ಕೇಂದ್ರ ಬಜೆಟ್ನಲ್ಲಿ ಶೇ. 6ಕ್ಕೆ ಇಳಿಸಿದ್ದರಿಂದ ದೇಶೀ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನದ ಬೆಲೆ 10 ಗ್ರಾಂಗೆ 3350 ರೂ.ನಷ್ಟು ಕುಸಿತ ಕಂಡು 72,300 ರೂ.ಗೆ ತಲುಪಿತು. ಸೋಮವಾರ ಇದರ ಬೆಲೆ 75,650 ರೂ. ಇತ್ತು. ಬೆಳ್ಳಿ ಬೆಲೆ ಕೂಡ ಮಂಗಳವಾರ ಕೆಜಿಗೆ 3500 ರೂ.ನಷ್ಟು ಇಳಿಕೆಯಾಗಿ 87,500 ರೂ.ಗೆ ತಲುಪಿತು. ಹಿಂದಿನ ದಿನ ಇದರ ಬೆಲೆ 91 ಸಾವಿರ ರೂ. ಇತ್ತು.
ಸುಂಕ ಹೆಚ್ಚಳ: ದೇಶೀಯ ತಾಂತ್ರಿಕ ಉತ್ಪನ್ನಗಳ ಉತ್ಪಾದನೆ ಉತ್ತೇಜಿಸಲು ಕೇಂದ್ರ ಸರ್ಕಾರ ಮದರ್ಬೋರ್ಡ್ಗಳ ಮೇಲಿನ ಆಮದು ಸುಂಕವನ್ನು ಶೇಕಡಾ 5ರಷ್ಟು ಹೆಚ್ಚಿಸಲು ತೀರ್ವನಿಸಿದೆ. ಈ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಿರುವ ಸಚಿವರು, ನಿರ್ದಿಷ್ಟ ಟೆಲಿಕಾಂ ಉಪಕರಣಗಳ ಮೂಲ ಕಸ್ಟಮ್ಸ್ ಸುಂಕವನ್ನು 10ರಿಂದ 15 ಪ್ರತಿಶತಕ್ಕೆ ಹೆಚ್ಚಿಸಲು ತೀರ್ವನಿಸಲಾಗಿದೆ ಎಂದು ಹೇಳಿದ್ದಾರೆ. ಪರಮಾಣು ಶಕ್ತಿ, ನವೀಕರಿಸಬಹುದಾದ ಇಂಧನ, ಬಾಹ್ಯಾಕಾಶ, ರಕ್ಷಣೆ, ದೂರಸಂಪರ್ಕ ಮತ್ತು ಹೈಟೆಕ್ ಎಲೆಕ್ಟ್ರಾನಿಕ್ಸ್ನಂತಹ ಕ್ಷೇತ್ರಗಳಿಗೆ ಲಿಥಿಯಂ, ತಾಮ್ರ ಸೇರಿ 25 ಖನಿಜಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲು ಸಚಿವರು ಪ್ರಸ್ತಾಪಿಸಿದ್ದಾರೆ.
ನವದೆಹಲಿ: ಎನ್ಡಿಎ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಬಿಹಾರಕ್ಕೆ 26 ಸಾವಿರ ಕೋಟಿ ರೂ. ಮತ್ತು ಆಂಧ್ರಕ್ಕೆ 15 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಬಿಹಾರದಲ್ಲಿ ವಿಮಾನ ನಿಲ್ದಾಣ, ಹೆದ್ದಾರಿ, ವಿದ್ಯುತ್, ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಹಣ ಒದಗಿಸಲಾಗುತ್ತಿದೆ. ನೆರೆಹಾವಳಿ ಸಮಸ್ಯೆ ಪರಿಹರಿಸುವುದಕ್ಕೆ 11,500 ಕೋಟಿ ರೂ. ನೀಡಲೂ ಕೇಂದ್ರ ಮುಂದಾಗಿದೆ.ಇದೇ ವೇಳೆ, ಆಂಧ್ರದ ರಾಜಧಾನಿಯಾಗಿ ಅಮರಾವತಿಯ ಅಭಿವೃದ್ಧಿ, ಪೋಲಾವರಂ ನೀರಾವರಿ ಯೋಜನೆ ತ್ವರಿತ ಅನುಷ್ಠಾನ, ಹಿಂದುಳಿದ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ಕಾಗಿ ಆಂಧ್ರಕ್ಕೆ ಹೆಚ್ಚಿನ ಹಣವನ್ನು ಬಜೆಟ್ನಲ್ಲಿ ಪ್ರಕಟಿಸಲಾಗಿದೆ.