

ಮುತ್ತು ಗ್ವಾತಗಿ ಹನುಮಸಾಗರ
ಸಾಂಪ್ರದಾಯಿಕ ಬೆಳೆಗಳಾದ ಜೋಳ, ಮೆಕ್ಕೆಜೋಳ, ಸಜ್ಜೆ ಸೇರಿ ವಿವಿಧ ಬೆಳೆ ಬೆಳೆದು ಮಾಡಿದ ಖರ್ಚು ಪಡೆಯಲು ಹರಸಾಹಸ ಪಡುತ್ತಿದ್ದ ರೈತರು ವಾಣಿಜ್ಯ ಕೃಷಿಯತ್ತ ವಾಲುತ್ತಿದ್ದಾರೆ. ಹನುಮನಾಳ ಹೋಬಳಿಯ ಬಹುತೇಕ ರೈತರು ಕಡಿಮೆ ಅವಧಿಯಲ್ಲಿ ಅಧಿಕ ಲಾಭ ನೀಡುವ ಚೆಂಡು ಹೂವು ಬೆಳೆಯಲು ಮುಂದಾಗಿದ್ದಾರೆ.
ಹನುಮನಾಳ ಹೋಬಳಿ ವ್ಯಾಪ್ತಿಯ ತುಮರಿಕೊಪ್ಪ, ಜಹಗೀರಗುಡದೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಎರಡು ಸಾವಿರ ಎಕರೆಯಲ್ಲಿ ಚೆಂಡು ಹೂವು ಬೆಳೆಯಲಾಗಿದೆ. ಪ್ರತಿ ಎಕರೆಯಲ್ಲಿ 15 ಸಾವಿರ ಸಸಿಗಳನ್ನು ನೆಡಲಾಗುತ್ತದೆ. ಸಸಿ ನೆಟ್ಟು 40 ದಿನಗಳ ನಂತರ ಫಸಲು ಬರಲು ಆರಂಭವಾಗುತ್ತದೆ. ಒಂದು ಎಕರೆಯಲ್ಲಿ 200 ಕೆಜಿಯಿಂದ ಆರಂಭವಾಗುವ ಹೂವು ನಂತರದ ದಿನಗಳಲ್ಲಿ ಟನ್ ಲೆಕ್ಕದಲ್ಲಿ ಬಿಡುತ್ತವೆ. ಹೂ ಬೆಳೆಗಾರರಿಗೆ ಹಾವೇರಿ ಹಾಗೂ ತಿಪಟೂರು ಮೂಲದ ಕಂಪನಿಗಳು ನೆರವಾಗಿವೆ. ರೈತರಿಗೆ ಬೀಜ, ಗೊಬ್ಬರ, ಕ್ರೀಮಿನಾಶಕ ವಿತರಿಸುವುದಲ್ಲದೆ ರೈತರ ಜಮೀನಿಗೇ ಬಂದು ಹೂವುಗಳನ್ನು ತೆಗೆದುಕೊಂಡು ಹೋಗುತ್ತಿವೆ. ಹೂವು ಕಟಾವು ಮಾಡುವ ಒಂದಿನ ಮೊದಲು ಕಂಪನಿಯವರಿಗೆ ತಿಳಿಸಿದರೆ ಸಾಕು ಮರುದಿನ ಸಂಜೆ ರೈತರ ಜಮೀನಿಗೆ ವಾಹನದಲ್ಲಿ ಬಂದು ಕೆಜಿಗೆ 10 ರೂ.ಯಂತೆ ಕೊಂಡೊಯ್ಯುತ್ತಾರೆ.
ಈ ಭಾಗದ ರೈತರು ಹಿಂದೆ ಕಲ್ಲಂಗಡಿ, ಸೂರ್ಯಕಾಂತಿ, ದಾಳಿಂಬೆ, ವೀಳ್ಯದೆಲೆ ಸೇರಿ ವಿವಿಧ ದೀರ್ಘಕಾಲದ ಬೆಳೆಗಳನ್ನು ಬೆಳೆಯುತ್ತಿದ್ದರು. ಚೆಂಡು ಹೂವನ್ನು ದೀಪಾವಳಿ ಸಂದರ್ಭದಲ್ಲಿ ಮಾತ್ರ ಬೆಳೆಯುತ್ತಿದ್ದರು. ಆದರೆ, ಈಗ ಮುಂಗಾರಿನಲ್ಲಿ ಚೆಂಡು ಹೂವು ಬೆಳೆದು ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಮಾರಿಗೋಲ್ಡ್, ಮೇರಿ ಮೊಗ್ಗು ಎಂದು ಕರೆಯುವ ಎರಡು ವಿಧವಾದ ಚೆಂಡು ಹೂವನ್ನು ರೈತರು ಬೆಳೆಯುತ್ತಿದ್ದಾರೆ. ಕಡುಗೆಂಪಿನಿಂದ ಕೂಡಿರುವ ಹೂವಗಳನ್ನು ಔಷಧ, ಬಣ್ಣ ಹಾಗೂ ಸುಗಂಧ ದ್ರವ್ಯ ಉತ್ಪಾದನೆಗೆ ಬಳಕೆಯಾಗುತ್ತದೆ.
ಹಿಂದೆ ದೀರ್ಘಾವಧಿಯ ಬೆಳೆಗಳನ್ನು ಬೆಳೆದು ಲಾಭ ಬಾರದಿದ್ದರಿಂದ ನಷ್ಟ ಅನುಭವಿಸುತ್ತಿದ್ದೆ. ಸದ್ಯ ಚೆಂಡು ಹೂವು ಬೆಳೆಯುತ್ತಿದ್ದು, ಕಂಪನಿಯವರು ಬೆಳೆ ಬೆಳೆಯಲು ಬೇಕಾದ ಅಗತ್ಯ ಸಾಮಗ್ರಿ ನೀಡಿ, ಹೊಲಕ್ಕೆ ಬಂದು ಹೂವುಗಳನ್ನು ತೂಕ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ಜಾಸ್ತಿ ಶ್ರಮವಿಲ್ಲದೆ ಹೆಚ್ಚು ಲಾಭ ಬರುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಚೆಂಡು ಹೂವು ಬೆಳೆಯುತ್ತಿದ್ದೇನೆ.| ರಮೇಶ ಲೋಕಪ್ಪ ಪೂಜಾರ, ರೈತ, ತುಮರಿಕೊಪ್ಪ