

ರಾಣೆಬೆನ್ನೂರ: ರಾಜ್ಯದ ವಿವಿಧೆಡೆ ಎಪಿಎಂಸಿಯಿಂದ 18 ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಹನುಮನಹಟ್ಟಿಯಲ್ಲಿ 10.35 ಕೋಟಿ ರೂ. ವೆಚ್ಚದ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡಿದರೆ ಮಾತ್ರ ನಷ್ಟದಿಂದ ಪಾರಾಗಲು ಸಾಧ್ಯ. ಹೀಗಾಗಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ದಾಸ್ತಾನಿಗೆ ಹೆಚ್ಚು ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ. ಈಗ ತಂತ್ರಜ್ಞಾನ ಬದಲಾಗಿದೆ. ಆಧುನಿಕ ತಂತ್ರಗಾರಿಕೆ ಅಳವಡಿಸಿಕೊಂಡು ಕೋಲ್ಡ್ ಸ್ಟೋರೇಜ್ ನಿಮಿರ್ಸಲಾಗುತ್ತಿದೆ. ಮೂರ್ನಾಲ್ಕು ವರ್ಷಗಳ ಹಿಂದೆ ತೋಟಗಾರಿಕೆ ಬೆಳೆಯನ್ನು ಸಂಸ್ಕರಣೆ ಮಾಡದೆ ಮಾರಾಟ ಮಾಡಿದ್ದರಿಂದ 40 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ಕೋಲ್ಡ್ ಸ್ಟೋರೇಜ್ ಸೌಲಭ್ಯ ಇದ್ದರೆ ನಷ್ಟದಿಂದ ಪಾರಾಗಬಹುದು ಎಂದರು.
ಕೃಷಿ ಮತ್ತು ತೋಟಗಾರಿಕೆ ಬೆಳೆ ಮಾರುಕಟ್ಟೆಗೆ ಬರುವ ಸಮಯದಲ್ಲಿ ಬೆಲೆ ಕುಸಿತ ಕಂಡು ಬದರೆ ತಕ್ಷಣ ಮಾರಾಟ ಮಾಡದೆ ಕೋಲ್ಡ್ ಸ್ಟೋರೇಜ್ ಸೌಲಭ್ಯ ಬಳಸಿಕೊಳ್ಳಬೇಕು. ಇನ್ನೂ ನಾಲ್ಕೆ$ದು ವರ್ಷ ಕಬ್ಬು ಮತ್ತು ಮೆಕ್ಕೆಜೋಳ ಬೆಳೆದರೆ ಸಮಸ್ಯೆ ಇಲ್ಲ. ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಮೆಕ್ಕೆಜೋಳದಿಂದ ಈಥನಾಲ್ ಉತ್ಪಾದನೆ ಮಾಡಲಾಗುತ್ತಿದೆ. ಹಾವೇರಿಗೆ 2-3 ಈಥನಾಲ್ ಘಟಕಗಳು ಬರುತ್ತಿವೆ. ಕಬ್ಬು ಮತ್ತು ಮೆಕ್ಕೆಜೋಳ ಬೆಳೆದರೆ ನಷ್ಟ ಭಯ ಕಡಿಮೆಯಾಗಲಿದೆ ಎಂದರು.
ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಬ್ಯಾಡಗಿ ತಾಲೂಕಿನಲ್ಲಿ ಇತ್ತೀಚೆಗೆ ಚಿಕ್ಕಬಾಸೂರಿನಲ್ಲಿ ಎಪಿಎಂಸಿಯಿಂದ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಈಗ ತೋಟಗಾರಿಕೆ ಇಲಾಖೆಯಿನಿಂದ ಮತ್ತೊಂದು ಕೋಲ್ಡ್ ಸ್ಟೋರೇಜ್ಗೆ ಭೂಮಿ ಪೂಜೆ ಮಾಡಲಾಗಿದೆ ಎಂದರು.
ಖಾಸಗಿ ಒಡೆತನದ ಕೋಲ್ಡ್ ಸ್ಟೋರೇಜ್ ತೆಲಂಗಾಣ ಹೊರತುಪಡಿಸಿದರೆ ಬ್ಯಾಡಗಿಯಲ್ಲೇ ಅಧಿಕವಾಗಿವೆ. ರಾಣೆಬೆನ್ನೂರ ತಾಲೂಕಿನಲ್ಲಿ ಬೀಜೋತ್ಪಾದನೆ ಚಟುವಟಿಕೆಗಳು ಹೆಚ್ಚಿವೆ. ಹಾನಗಲ್ಲ ತಾಲೂಕಿನಲ್ಲಿ ಮಾವು ಅಧಿಕಾವಾಗಿದೆ. ಹಾವೇರಿಯಲ್ಲೂ ತೋಟಗಾರಿಕೆ ಬೆಳೆ ಹೆಚ್ಚಿದೆ. ಹೀಗಾಗಿ ಕೋಲ್ಡ್ ಸ್ಟೋರೇಜ್ಗಳ ಅವಶ್ಯಕತೆ ಇದೆ ಎಂದರು.
ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್ಪಿ ಅಂಶುಕುಮಾರ, ಬಸವರಾಜ ಸವಣೂರ ಮತ್ತಿತರರು ಉಪಸ್ಥಿತರಿದ್ದರು.