

ನಂಬಿಕೆ ಮತ್ತು ಶ್ರದ್ಧೆಗೆ ಅಸಾಧ್ಯವಾದದ್ದನ್ನೂ ಸಾಧ್ಯವಾಗಿಸುವ ಶಕ್ತಿ ಇದೆ. ಅದರಲ್ಲೂ ಸನಾತನ ಧರ್ಮದ ಆಚರಣೆಗಳು ಮತ್ತು ಆರಾಧನೆಯ ಶಕ್ತಿಯೇ ಅನನ್ಯ. ಈ ಸತ್ಯ ಸೂರ್ಯನಷ್ಟೇ ಪ್ರಖರ ಎಂಬುದಕ್ಕೆ ಇತಿಹಾಸ ಮತ್ತು ವರ್ತಮಾನ ಸಾಕ್ಷಿಯಾಗಿವೆ. ಹಿಂದೂಗಳು ಮಾತ್ರವಲ್ಲ, ಇತರ ಧರ್ಮೀಯರು ಹೇಗೆ ಈ ಆಚರಣೆಗಳನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದಾರೆ ಎಂಬುದಕ್ಕೆ ಅಸಂಖ್ಯ ನಿದರ್ಶನಗಳಿವೆ. ಖ್ಯಾತ ನಿರ್ವಪಕ ಸಂಜಯ್ ಖಾನ್ ಕುಟುಂಬ ಕೂಡ ಇದಕ್ಕೆ ಹೊರತಲ್ಲ. ಖಾನ್ ಮತ್ತು ಅವರ ಕುಟುಂಬ ಹನುಮನ ಭಕ್ತರಾಗಿದ್ದು ಹೇಗೆ, ಏಕೆ ಎಂಬುದರ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.
ಎಲ್ಲಿಯ ಹನುಮ ಹಾಗೂ ಎಲ್ಲಿಯ ಖಾನ್ ಕುಟುಂಬ! ಅಚ್ಚರಿಯೆನಿಸಿದರೂ, ಬದುಕಿನ ಪಾಠಗಳು, ಸಂದರ್ಭಗಳು, ಆಪತ್ತುಗಳು ಪರಿಸ್ಥಿತಿಯನ್ನು ಬದಲಾಯಿಸಿ ಬಿಡುತ್ತವೆ ಮತ್ತು ಬದುಕಿನಲ್ಲಿ ಸತ್ಯದ ದರ್ಶನ ಮಾಡಿಸುತ್ತವೆ ಎಂಬುದು ನಿರ್ವಿವಾದ. ಮುಖ್ಯವಾಗಿ, ‘ಎಲ್ಲರನ್ನೂ ಪೊರೆಯುವ ಶಕ್ತಿ ಒಂದೇ’ ಎಂಬ ಸತ್ಯ ಮತ್ತೆ ಮತ್ತೆ ಸಾಬೀತಾಗುತ್ತಲೇ ಬಂದಿದೆ. ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಗಣೇಶನ ಆರಾಧಕರು. ಮಾತ್ರವಲ್ಲ, ಪ್ರತಿ ವರ್ಷ ಗಣೇಶ ಚತುರ್ಥಿಯಂದು ಗಣೇಶನನ್ನು ಕೂರಿಸಿ, ಶ್ರದ್ಧೆಯಿಂದ ಪೂಜಿಸುತ್ತಾರೆ. ಆದರೆ, ಇಲ್ಲಿ ವಿವರಿಸುತ್ತಿರುವುದು ಸಲ್ಮಾನ್ ಖಾನ್ ಭಕ್ತಿಯ ಬಗ್ಗೆ ಅಲ್ಲ. ಬಾಲಿವುಡ್ನ ಖ್ಯಾತ ನಿರ್ದೇಶಕ, ನಿರ್ವಪಕ ಮತ್ತು ನಟ ಸಂಜಯ್ ಖಾನ್ ಅವರ ಬಗ್ಗೆ ಮತ್ತು ಅವರು ಹನುಮನ ಭಕ್ತರಾದ ಪರಿಯ ಕುರಿತಂತೆ.
ಸಂಜಯ್ ಖಾನ್ ಮೂಲ ಹೆಸರು ಶಾಹ್ ಅಬ್ಬಾಸ್ ಅಲಿ ಖಾನ್. ಮೂಲತಃ ಬೆಂಗಳೂರಿನವರು (ಜನನ: 1940ರ ಜನವರಿ 3). ಮುಸ್ಲಿಮರಲ್ಲಿ ಮೇಲ್ವರ್ಗ ಎಂದು ನಂಬಲಾಗಿರುವ ಪಠಾಣ್ ಪಂಗಡಕ್ಕೆ ಸೇರಿದವರು. ನಟ ಫಿರೋಜ್ ಖಾನ್ ಹಾಗೂ ಚಿತ್ರ ನಿರ್ವಪಕ ಅಕ್ಬರ್ ಖಾನ್ ಇಬ್ಬರೂ ಸಂಜಯ್ ಸಹೋದರರು. ಅದು 1960ರ ದಶಕ. ಜರೀನ್ ಕಟ್ರಕ್ ಆಗಲೇ ಬಾಲಿವುಡ್ನಲ್ಲಿ ಖ್ಯಾತ ನಟಿಯಾಗಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ರೂಪದರ್ಶಿಯಾಗಿಯೂ ಖ್ಯಾತಿ ಗಳಿಸಿದ್ದರು. ‘ಏಕ್ ಫೂಲ್ ದೋ ಮಾಲಿ’, ‘ತೇರೇ ಘರ್ ಕೇ ಸಾಮ್ನೆ’ ಅಂಥ ಹಿಟ್ ಚಿತ್ರಗಳನ್ನು ನೀಡಿದ್ದರು. ಜರೀನ್ ಪಾರ್ಸಿ ಸಮುದಾಯದವರು ಮತ್ತು ಹಿಂದೂ ಆಚರಣೆಗಳನ್ನು ಪಾಲಿಸುತ್ತಿದ್ದರು. ಒಂದು ಮದುವೆ ಸಮಾರಂಭದಲ್ಲಿ ಸಂಜಯ್ ಖಾನ್ ತಾಯಿ ಮತ್ತು ಜರೀನ್ ತಾಯಿ ಭೇಟಿಯಾದರು. ಆ ಬಳಿಕ ಜರೀನ್ ಪ್ರೇಮದಲ್ಲಿ ಬಿದ್ದ ಶಾಹ್ ಅಬ್ಬಾಸ್ ಅಲಿ ಅಲಿಯಾಸ್ ಸಂಜಯ್ ಖಾನ್ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟರು. ‘ನನ್ನ ಧರ್ಮವೇ ಬೇರೆ, ನಿಮ್ಮ ಧರ್ಮವೇ ಬೇರೆ. ಮದುವೆ ಸಾಧ್ಯವಿಲ್ಲ’ ಎಂದು ಜರೀನ್ ಸ್ಪಷ್ಟವಾಗಿಯೇ ಹೇಳಿದರು. ಸಂಜಯ್ ಮತ್ತೊಮ್ಮೆ ಬಿನ್ನವಿಸಿಕೊಂಡರು. ‘ಹಾಗಾದರೆ, ನನ್ನ ಧರ್ಮದ ಆಚರಣೆ ನಾನು ಮಾಡುತ್ತೇನೆ, ನಿಮ್ಮ ಧರ್ಮವನ್ನು ನೀವು ಆಚರಿಸಿ. ಇದಕ್ಕೆ ಒಪ್ಪಿಗೆಯಿದ್ದರೆ ಮದುವೆ’ ಎಂದರು ಜರೀನ್. ಕೂಡಲೇ ಒಪ್ಪಿದರು ಖಾನ್. 1966ರಲ್ಲಿ ಮದುವೆ ನಡೆಯಿತು. ಒಂದೇ ಮನೆಯಲ್ಲಿ ಗಣೇಶ ಪೂಜೆ ಮತ್ತು ನಮಾಜ್ ಎರಡೂ ನಡೆಯುತ್ತಿದ್ದವು. ಮದುವೆಯ ಬಳಿಕ ಲೇಖಕಿಯಾಗಿ ಹಾಗೂ ಇಂಟಿರಿಯರ್ ಡಿಸೈನರ್ ಆಗಿ ಹೆಸರು ಮಾಡಿದರು ಜರೀನ್.
ಅದು 1990ರ ದಶಕ. ದೂರದರ್ಶನದಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ಪ್ರಸಿದ್ಧಿಯ ಉತ್ತುಂಗವನ್ನು ತಲುಪಿದ್ದವು. ಈ ಎರಡೂ ಧಾರಾವಾಹಿ ಪ್ರಸಾರದ ವೇಳೆ ರಸ್ತೆಗಳು ಖಾಲಿ ಇರುತ್ತಿದ್ದವು, ಜನರೆಲ್ಲ ಟೀವಿ ಮುಂದೆ ಇರುತ್ತಿದ್ದರು. ಆ ಸಂದರ್ಭದಲ್ಲೇ ಖಏಉ ಖಗಣ್ಕಈ ಣಊ ಖಐಕಖಿ ಖಖಿಔಖಅಘ ಧಾರಾವಾಹಿ ನಿರ್ವಿುಸುವ ಹೊಣೆಗಾರಿಕೆ ಸಂಜಯ್ ಖಾನ್ ಮೇಲಿತ್ತು. ಈ ಧಾರಾವಾಹಿಯ ನಿರ್ದೇಶಕ, ನಿರ್ವಪಕ ಮತ್ತು ನಟನಾಗಿ ಖಾನ್ ಕಾರ್ಯನಿರ್ವಹಿಸುತ್ತಿದ್ದರು. ಮೈಸೂರಿನಲ್ಲಿ ಚಿತ್ರೀಕರಣ ಭರದಿಂದ ನಡೆದಿತ್ತು. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಹೈದರಾಲಿಯ ಮದುವೆಯ ಸಂಭ್ರಮದ ದೃಶ್ಯಾವಳಿಗಳನ್ನು ಚಿತ್ರೀಕರಿಸುವಾಗ ಪಟಾಕಿ ಸಿಡಿಸಲಾಯಿತು. ಪಟಾಕಿಯ ಕಿಡಿಯಿಂದ ಹೊತ್ತಿಕೊಂಡ ಬೆಂಕಿ ಬಹುದೊಡ್ಡ ಅನಾಹುತವನ್ನೇ ಸೃಷ್ಟಿಸಿತು. 1989ರ ಫೆಬ್ರವರಿ 8ರಂದು ರಾತ್ರಿ 10 ಗಂಟೆಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಧಾರಾವಾಹಿ ಚಿತ್ರೀಕರಣದ 50ಕ್ಕೂ ಹೆಚ್ಚು ಸಿಬ್ಬಂದಿ (ಕೆಲ ಮೂಲಗಳ ಪ್ರಕಾರ 60 ಜನರು) ಪ್ರಾಣ ಕಳೆದುಕೊಂಡರು. ಸಿನಿ ಜಗತ್ತಿನಲ್ಲೇ ಕರಾಳವಾದ ಈ ಘಟನೆಯಲ್ಲಿ ನಟ ಖಾನ್ ಶೇಕಡ 75-80ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದರು.
ಇವರ ಪರಿಸ್ಥಿತಿ ನೋಡಿ ವೈದ್ಯರು ಕೂಡ ಕೈಚೆಲ್ಲಿದರು. ಖಾನ್ ಪ್ರಾಣ ಉಳಿಯುವುದು ಕಷ್ಟ, ಆದರೆ, ಸೋಂಕು (ಇನ್ಫೆಕ್ಷನ್) ತಾಗದಂತೆ ರಕ್ಷಿಸಲು ಆಸ್ಪತ್ರೆವಾಸ ಅನಿವಾರ್ಯ ಎಂದರು. ಒಟ್ಟು ಹದಿಮೂರು ತಿಂಗಳ ಆಸ್ಪತ್ರೆವಾಸದಲ್ಲಿ ಹನ್ನೊಂದು ತಿಂಗಳು ತುರ್ತು ನಿಗಾ ಘಟಕ (ಐಸಿಯು)ದಲ್ಲಿದ್ದ ಸಂಜಯ್ ಅವರಿಗೆ 72 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು! ಆದರೂ, ಪರಿಸ್ಥಿತಿ ಸುಧಾರಿಸಲಿಲ್ಲ. ಅದೊಂದು ದಿನ ಆಂಜನೇಯ ದೇವಸ್ಥಾನದ ಅರ್ಚಕರು ಆಸ್ಪತ್ರೆಗೆ ಬಂದು, ‘ಆಂಜನೇಯ ನನ್ನ ಕನಸಿನಲ್ಲಿ ಬಂದು ನಿಮಗೆ ಪ್ರಸಾದ ನೀಡಲು ಹೇಳಿದ್ದಾನೆ’ ಎಂದರು. ಆ ಅರ್ಚಕರು ಭಸ್ಮ, ಕುಂಕುಮ, ಅಕ್ಷತೆಯನ್ನು ಕೊಟ್ಟು, ‘ಹನುಮಾನ್ ಚಾಲೀಸಾ’ ಪಠಣ ಮಾಡಲು ಹೇಳಿದರು.
ಅದರಂತೆ ಆಸ್ಪತ್ರೆಯ ಕೋಣೆಯಲ್ಲಿ ಹನುಮಾನ್ ಚಾಲೀಸಾ ಪಠಣ ನಡೆಯತೊಡಗಿತು. ಪತ್ನಿ ಜರೀನ್ ತಪ್ಪದೇ ಈ ದಿನಚರಿಯನ್ನು ಅನುಸರಿಸಿ, ಖಾನ್ಗೆ ಹನುಮಾನ್ ಚಾಲೀಸಾ ಕೇಳಿಸತೊಡಗಿದರು. ವೈದ್ಯರಿಗೇ ಅಚ್ಚರಿಯಾಗುವಂತೆ ಸಂಜಯ್ ಆರೋಗ್ಯದಲ್ಲಿ ಬಹುಬೇಗ ಚೇತರಿಕೆ ಕಂಡುಬಂತು. ಖಾನ್ ಕುಟುಂಬದ ಸದಸ್ಯರು ಆ ಅರ್ಚಕರನ್ನು ಹುಡುಕಿಕೊಂಡು ಹೋಗಿ, ಸಂಜಯ್ ಚೇತರಿಕೆಗಾಗಿ ಪ್ರತಿನಿತ್ಯ ಸಂಕಲ್ಪ ಮಾಡಿ, ಪ್ರಾರ್ಥನೆ ಮಾಡಲು ನಿವೇದಿಸಿದರು. ಪ್ರಾರ್ಥನೆ ಮತ್ತು ಹನುಮಾನ್ ಚಾಲೀಸಾ ಪಠಣ ಫಲ ನೀಡಿತ್ತು. 13 ತಿಂಗಳ ನಂತರ ಸಂಜಯ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆ ಸೇರಿದರು. ಬಳಿಕ ಮನೆಯಲ್ಲಿ ಆಂಜನೇಯನ ನಿತ್ಯ ಆರಾಧನೆ ಆರಂಭವಾಯಿತು. ಜರೀನ್ ಜತೆಗೆ ಸಂಜಯ್ ಕೂಡ ಆಂಜನೇಯನ ಉಪಾಸನೆ ಮಾಡತೊಡಗಿದರು. ವಾರದಲ್ಲಿ ಒಂದು ದಿನ ಉಪವಾಸ ವ್ರತ ಆಚರಿಸತೊಡಗಿದರು.
ದೀರ್ಘ ಆಸ್ಪತ್ರೆವಾಸದಿಂದ ಬಳಲಿ, ನಿತ್ರಾಣರಾಗಿದ್ದ ಸಂಜಯ್ ಖಾನ್ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದರು. ಆರ್ಥಿಕವಾಗಿಯೂ ತುಂಬ ನಷ್ಟ ಅನುಭವಿಸಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಸದವಕಾಶವೊಂದು ಹುಡುಕಿಕೊಂಡು ಬಂತು. ದೂರದರ್ಶನದವರು, ‘ಜೈ ಹನುಮಾನ್’ ಧಾರಾವಾಹಿ ನಿರ್ವಿುಸಲು ಹೇಳಿದರು. ಈ ಆಫರ್ ಬಂದಾಗ ಖಾನ್ಗೆ ಮತ್ತಷ್ಟು ಅಚ್ಚರಿ. ಇದೆಲ್ಲವೂ ಆ ಆಂಜನೇಯನ ಮಹಿಮೆ ಎಂದು ಒಪ್ಪಿಕೊಂಡು, ಕೆಲಸದಲ್ಲಿ ತೊಡಗಿದರು. ಧಾರಾವಾಹಿ ನಿರ್ವಣಕ್ಕಾಗಿ ಸಾಲ ಮಾಡಿದರು. 178 ಕಂತುಗಳಲ್ಲಿ ಪ್ರಸಾರವಾದ ‘ಜೈ ಹನುಮಾನ್’ ಧಾರಾವಾಹಿ ಕಿರುತೆರೆಯಲ್ಲಿ ಹೊಸಅಲೆಯನ್ನೇ ಸೃಷ್ಟಿಸಿತು. ನಿರ್ವಪಕ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಇವರು ಈ ಧಾರಾವಾಹಿಯಲ್ಲಿ ಮಹರ್ಷಿ ವಾಲ್ಮೀಕಿಯ ಪಾತ್ರವನ್ನೂ ಮಾಡಿದ್ದು ವಿಶೇಷ. ಇದು ಸಂಜಯ್ ಖಾನ್ಗೆ ಖ್ಯಾತಿಯ ಜತೆಗೆ ಆರ್ಥಿಕ ಭದ್ರತೆಯನ್ನೂ ಒದಗಿಸಿತು. ಪ್ರಾಣ ಉಳಿಸಿದ್ದ ಹನುಮಂತ ಈಗ ಅವಕಾಶವನ್ನೂ ಕಲ್ಪಿಸಿ, ಹೊಸ ಬದುಕನ್ನು ನೀಡಿದ್ದ. ಇದರಿಂದ ಆಂಜನೇಯನ ಆರಾಧನೆಯನ್ನು ಈ ಕುಟುಂಬ ಮತ್ತಷ್ಟು ಶ್ರದ್ಧೆಯಿಂದ ಮಾಡತೊಡಗಿತು.
ಸಂಜಯ್ ಖಾನ್ ಪತ್ನಿ ಜರೀನ್ ಖಾನ್ 81ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನವೆಂಬರ್ 7ರಂದು ಮುಂಬೈನಲ್ಲಿ ನಿಧನರಾದರು. ಈ ದಂಪತಿಗೆ ನಾಲ್ವರು ಮಕ್ಕಳು ಜಾಯೇದ್ ಖಾನ್, ಸುಜೈನ್ ಖಾನ್ (ಬಾಲಿವುಡ್ ನಟ ಹೃತಿಕ್ ರೋಷನ್ ಮಾಜಿ ಪತ್ನಿ), ಫರಾಹ್ ಖಾನ್ ಹಾಗೂ ಸಿಮೋನ್ ಅರೋರಾ. ಮುಂಬೈಯ ಸಾಂತಾಕ್ರೂಜ್ ಪ್ರದೇಶದ ಪವನಹಂಸ್ ಸ್ಮಶಾನದಲ್ಲಿ ನ.8ರಂದು ಹಿಂದೂ ಧಾರ್ವಿುಕ ವಿಧಿವಿಧಾನದಂತೆ ಜರೀನ್ ಅಂತಿಮ ಸಂಸ್ಕಾರ ನೆರವೇರಿತು. ಪುತ್ರ ಜಾಯೇದ್ ಖಾನ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. 13ನೇ ದಿನ ವೈಕುಂಠ ಸಮಾರಾಧನೆ ಕೂಡ ನಡೆಯಲಿದೆ. ಹಿಂದೂ ಪದ್ಧತಿಯಂತೆಯೇ ಅಂತಿಮ ಸಂಸ್ಕಾರ ನಡೆಸಬೇಕೆಂದು ಜರೀನ್ ಮುಂಚಿತವಾಗಿಯೇ ಕುಟುಂಬ ಸದಸ್ಯರಿಗೆ ತಿಳಿಸಿದ್ದರಂತೆ. ಹೀಗಾಗಿ, ಜರೀನ್ ಅವರ ಅಂತಿಮ ಆಸೆಯನ್ನು ಪತಿ ಸಂಜಯ್ ಮತ್ತು ಪುತ್ರ ಜಾಯೇದ್ ನೆರವೇರಿಸಿದ್ದಾರೆ. ಜರೀನ್ ಅಂತಿಮ ಸಂಸ್ಕಾರದಲ್ಲಿ ಬಾಲಿವುಡ್ ಕಲಾವಿದರಾದ ಹೃತಿಕ್ ರೋಶನ್, ಸಬಾ ಆಜಾದ್, ಕಾಜೋಲ್, ರಾಣಿ ಮುಖರ್ಜಿ, ಜಾಕಿ ಶ್ರಾಫ್, ಬಾಬಿ ದೇವೋಲ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.