ಪೊಲೀಸ್ ಮಾರ್ಗಸೂಚಿಯಂತೆ ಜಯಂತಿ ಆಚರಿಸಿ

HUN-DEC-14-1(HANUMA JAYANTHI MEETING)
Published on

ಹುಣಸೂರು: ಶಾಂತಿ, ಸೌಹಾರ್ದತೆಯ ಮೂಲಕ ಹನುಮ ಜಯಂತಿ ಆಚರಣೆಗೆ ಪೊಲೀಸ್ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ. ನಿಮ್ಮ ಊರಿನ ಹೆಮ್ಮೆ, ಗೌರವ, ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದರು.


ನಗರದ ಪಟ್ಟಣ ಠಾಣೆಯಲ್ಲಿ ಹನುಮ ಜಯಂತಿ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಸಭೆಗೆ ಹಾಜರಿರುವ ನೀವೆಲ್ಲರೂ ಜಯಂತಿ ಆಚರಣೆ ದಿನ ಕಾಣುವುದಿಲ್ಲ ಏಕೆ? ಇದು ನಮ್ಮ ಅನುಭವದ ಮಾತಾಗಿದೆ. ನಿಮ್ಮೆಲ್ಲರ ಸಮಕ್ಷಮದಲ್ಲಿ ಜಯಂತಿ ಆಚರಣೆ ಶಾಂತಿಯುತವಾಗಿ ನಡೆಯಬೇಕಿದೆ. ಅದ್ದೂರಿಯಾಗಿ ಹನುಮ ಜಯಂತಿ ಆಚರಿಸುವುದಾಗಿ ತಾಲೂಕು ಹನುಮಂತೋತ್ಸವ ಸಮಿತಿ ಹೇಳುತ್ತಿದೆ. ಈ ಹಿಂದಿನ ಸಾಲಿನಲ್ಲಿ ನೀಡಿದ್ದ ಪೊಲೀಸ್ ಭದ್ರತೆಯನ್ನೇ ಈ ಬಾರಿಯೂ ನೀಡಲು ಸಿದ್ಧರಿದ್ದೇವೆ. ಆದರೆ, ಪೊಲೀಸ್ ಇಲಾಖೆ ನೀಡಿರುವ ಮಾರ್ಗದರ್ಶನಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ನೇಮಿಸಿಕೊಳ್ಳಿ. ಬೇರೆ ಸ್ಥಳಗಳಿಂದ ಬರಬಹುದಾದ ನಿಮ್ಮ ಸ್ನೇಹಿತರು, ಬಂಧುಗಳಿಗೆ ಇಲ್ಲಿನ ವಾತಾವರಣದ ಕುರಿತು ಸಮಗ್ರ ಮಾಹಿತಿ ನೀಡಿ. ಬಂಟಿಂಗ್ಸ್, ಬ್ಯಾನರ್ಸ್‌ಗಳನ್ನು ನಗರಸಭೆ ಅನುಮತಿ ಪಡೆದು ಪೊಲೀಸ್ ಸಿಬ್ಬಂದಿ ಸಮಕ್ಷಮದಲ್ಲೇ ಅಳವಡಿಸಬೇಕು ಎಂದು ಸಲಹೆ ನೀಡಿದರು.


24ರಿಂದ ಕಾರ್ಯಕ್ರಮ:
ತಾಲೂಕು ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್ ಮಾತನಾಡಿ, ಡಿ.24ರಿಂದ 26ರವರೆಗೆ ಜಯಂತಿ ಆಚರಿಸಲಾಗುವುದು. 24ರಂದು ಮೊದಲ ದಿನ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಹನುಮದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕಲ್ಪತರು ವೃತ್ತ, ಕರೀಗೌಡರ ಬೀದಿ, ಮೋಚಿಬೀದಿ, ಗಣೇಶನಗುಡಿ ಬೀದಿ, ಬ್ರಾಹ್ಮಣರ ಬೀದಿಯ ಮೂಲಕ ನಗರಸಭೆ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗುವುದು. ಅಂದು ಸಂಜೆ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. 25ರಂದು ನಗರಸಭೆ ಮೈದಾನದಲ್ಲಿ ಜಯಂತಿ ಅಂಗವಾಗಿ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವಿದೆ.


26ರಂದು ಬೆಳಗ್ಗೆ 11 ಗಂಟೆಗೆ ರಂಗನಾಥ ಬಡಾವಣೆಯಿಂದ ಪಂಚಲೋಹದ ಆಂಜನೇಯಸ್ವಾಮಿ ಮೆರವಣಿಗೆಗೆ ತಾಲೂಕಿನ ಮಾದಳ್ಳಿ ಉಕ್ಕಿನಕಂತೆ ಮಠ ಮತ್ತು ಗಾವಡಗೆರೆಯ ಶ್ರೀ ಗುರುಲಿಂಗ ಜಂಗಮದೇವರ ಮಠದ ಸ್ವಾಮೀಜಿಗಳು, ತಾಲೂಕಿನ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಗುವುದು. ನಂತರ ವಿವಿಧ ಕಲಾ ತಂಡಗಳೊಂದಿಗೆ ಕಲ್ಕುಣಿಕೆ ಸರ್ಕಲ್, ಶಬರಿಪ್ರಸಾದ್, ಸಂವಿಧಾನವೃತ್ತ, ಎಸ್‌ಜೆ ರಸ್ತೆ, ಜೆಎಲ್‌ಬಿ ರಸ್ತೆ, ಬಜಾರ್ ರಸ್ತೆ, ಹೊಸ ಬಸ್ ನಿಲ್ದಾಣ, ಕಲ್ಪತರು ವೃತ್ತದ ಮೂಲಕ ಆಂಜನೇಯಸ್ವಾಮಿ ದೇವಾಲಯದ ಆವರಣಕ್ಕೆ ಸಂಜೆ ತಲುಪಲಿದೆ ಎಂದು ಮಾಹಿತಿ ನೀಡಿದರು.
ಸಮಿತಿ ಸದಸ್ಯ ಚಂದ್ರಮೌಳಿ ಮಾತನಾಡಿ, ಮೆರವಣಿಗೆ ವೇಳೆ ಯಾವುದೇ ಜನಪ್ರತಿನಿಧಿಗಳನ್ನು ವೈಭವೀಕರಿಸುವ ಕಾರ್ಯ ಆಗದಂತೆ ಪೊಲೀಸ್ ಇಲಾಖೆ ಜನಪ್ರತಿನಿಧಿಗಳ ಸಭೆ ಆಯೋಜಿಸಿ ಅವರಿಗೆ ಮಾಹಿತಿ ನೀಡಬೇಕೆಂದು ಕೋರಿದರು.


ಸಮಿತಿ ಗೌರವಾಧ್ಯಕ್ಷ ಬಿ.ಎಸ್.ಯೋಗಾನಂದ ಕುಮಾರ್ ಮಾತನಾಡಿ, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ದೃಶ್ಯಗಳನ್ನು ಸೆರೆಹಿಡಿಯಲು ಡ್ರೋನ್ ಬಳಕೆ ಮತ್ತು ಡಿಜೆ ಅಳವಡಿಸಲು ಅವಕಾಶ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಡ್ರೋನ್ ಮತ್ತು ಡಿಜೆ ಬಳಸಲು ಅವಕಾಶ ನೀಡುವುದಿಲ್ಲ. ಧ್ವನಿವರ್ಧಕಗಳನ್ನು ಹಿತಮಿತವಾಗಿ(75 ಡೆಸಿಬಲ್ ಪ್ರಮಾಣ ಮೀರದಂತೆ) ಬಳಸಿಕೊಳ್ಳಬಹುದು ಎಂದರು.


ಮುಸ್ಲಿಂ ಮುಖಂಡ ಮುದಸ್ಸರ್ ಖಾನ್ ಮಾತನಾಡಿ, ಹನುಮ ಜಯಂತಿಯನ್ನು ಎಲ್ಲರೂ ಒಂದುಗೂಡಿ ಶಾಂತಿ ಸೌಹಾರ್ದತೆಯಿಂದ ಆಚರಿಸೋಣ ಎಂದರು.
ಸಮಿತಿ ಸದಸ್ಯರಾದ ಎಚ್.ವೈ.ಮಹದೇವ್, ಇಂಟೆಕ್ ರಾಜು, ರಮೇಶ್ ಕುಮಾರ್, ಸತ್ಯ ಎಂಎಎಸ್ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ, ಎಎಸ್‌ಪಿ ನಂದಿನಿ, ಉಪವಿಭಾಗಾಧಿಕಾರಿ ರುಚಿ ಬಿಂದಾಲ್, ಡಿವೈಎಸ್‌ಪಿ ಗೋಪಾಲಕೃಷ್ಣ, ತಹಸೀಲ್ದಾರ್ ಮಂಜುನಾಥ್, ನಗರಠಾಣೆ ಇನ್ಸ್‌ಪೆಕ್ಟರ್ ದೇವೇಂದ್ರಪ್ಪ, ಪ್ರಭಾರ ಪೌರಾಯುಕ್ತೆ ಶರ್ಮಿಳಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net