ನಮ್ಮ ಹತ್ತಿರ 130... ಭಾರತದ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ ಪಾಕ್​ ರೈಲ್ವೆ ಸಚಿವ ಹನೀಫ್ ಅಬ್ಬಾಸಿ! Hanif Abbasi

Hanif Abbasi
Published on

Hanif Abbasi : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿರುವುದರಿಂದ ಪಾಕಿಸ್ತಾನ ತೀವ್ರವಾಗಿ ಅಸಮಾಧಾನಗೊಂಡಿದೆ. ಪ್ರತಿದಿನ, ಪಾಕ್​ನ ನಾಯಕರು ಭಾರಿ ಹತಾಶೆಯಿಂದ ಒಂದಲ್ಲ ಒಂದು ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಈಗಾಗಲೇ ದಿವಾಳಿಯಾಗಿರುವ ಪಾಕಿಸ್ತಾನ, ಭಾರತದ ವಿರುದ್ಧ ಪ್ರತೀಕಾರಕ್ಕೆ ಹೆದರುತ್ತಿದೆ. ಯುದ್ಧ ಏನಾದರೂ ನಡೆದರೆ ಪಾಕಿಸ್ತಾನ ಜಗತ್ತಿನ ಭೂಪಟದಲ್ಲಿ ಅಳಿಸಿ ಹೋದರು ಅಚ್ಚರಿ ಪಡಬೇಕಿಲ್ಲ. ಹೀಗಾಗಿ ಅಲ್ಲಿನ ಜನರು ಆತಂಕದಲ್ಲಿದ್ದಾರೆ.

ಬಿದ್ರು ಮೀಸೆ ಮಣ್ಣಾಗಿಲ್ಲ ಎಂಬ ಗಾದೆ ಮಾತಿನಂತೆ ಪಾಕ್​ನ ರಾಜಕೀಯ ನಾಯಕರು ನಡೆದುಕೊಳ್ಳುತ್ತಿದ್ದಾರೆ. ತಮ್ಮ ದೇಶದ ಪರಿಸ್ಥಿತಿ ಗೊತ್ತಿದ್ದರೂ ಭಾರತದ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ. ಇತ್ತೀಚೆಗೆ, ಪಾಕಿಸ್ತಾನದ ರೈಲ್ವೆ ಸಚಿವ ಹನೀಫ್ ಅಬ್ಬಾಸಿ ಭಾರತದ ವಿರುದ್ಧ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.

ರಾವಲ್ಪಿಂಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಬ್ಬಾಸಿ, ಭಾರತ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ನಿಲ್ಲಿಸಿದರೆ, ಅದಕ್ಕೆ ನಾವು ಸೂಕ್ತ ಉತ್ತರವನ್ನು ನೀಡುತ್ತೇವೆ ಎಂದಿದ್ದಾರೆ.

ನಮ್ಮ ಎಲ್ಲ ಕ್ಷಿಪಣಿಗಳು ಭಾರತದ ಕಡೆಗೆ ಬರುತ್ತಿವೆ. ಭಾರತ ಯಾವುದೇ ದಿಟ್ಟ ಕ್ರಮ ಕೈಗೊಳ್ಳಲು ನಿರ್ಧರಿಸಿದರೆ, ಅದಕ್ಕೆ ಬೆಲೆ ತೆರಬೇಕಾಗುತ್ತದೆ. ನಾವು ವಿಶ್ವದ ಅತ್ಯಂತ ಶಕ್ತಿಶಾಲಿ ಪರಮಾಣು ಬಾಂಬ್‌ಗಳನ್ನು ಹೊಂದಿದ್ದೇವೆ. ಘೋರಿ, ಶಾಹೀನ್ ಮತ್ತು ಘಜ್ನವಿ ಕ್ಷಿಪಣಿಗಳು ಮತ್ತು 130 ಪರಮಾಣು ಸಿಡಿತಲೆಗಳನ್ನು ಒಳಗೊಂಡಂತೆ ಪಾಕಿಸ್ತಾನದ ಶಸ್ತ್ರಾಗಾರವನ್ನು "ಭಾರತಕ್ಕಾಗಿ ಮಾತ್ರ" ಇಡಲಾಗಿದೆ ಎಂದು ಅಬ್ಬಾಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ.

ರಾಜತಾಂತ್ರಿಕ ಪ್ರಯತ್ನಗಳ ಜೊತೆಗೆ, ತಮ್ಮ ಗಡಿಗಳನ್ನು ರಕ್ಷಿಸಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಪಹಲ್ಗಾಮ್ ದಾಳಿ ಕೇವಲ ಒಂದು ನೆಪವಷ್ಟೇ, ಭಾರತ ಯಾವಾಗಲೂ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಲು ಯೋಜಿಸಿದೆ ಎಂದು ಅಬ್ಬಾಸಿ ಆರೋಪಿಸಿದರು. ಅಲ್ಲದೆ, ನಮಗೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದರೆ, ಭಾರತ ಯುದ್ಧಕ್ಕೆ ಸಿದ್ಧರಾಗಿರಬೇಕು. ನಮ್ಮಲ್ಲಿರುವ ಮಿಲಿಟರಿ ಉಪಕರಣಗಳು ಹಾಗೂ ನಮ್ಮಲ್ಲಿರುವ ಕ್ಷಿಪಣಿಗಳು ಕೇವಲ ಪ್ರದರ್ಶನಕ್ಕೆ ಅಲ್ಲ. ನಾವು ದೇಶಾದ್ಯಂತ ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲಿ ಇರಿಸಿದ್ದೇವೆಂದು ಯಾರಿಗೂ ತಿಳಿದಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಇವೆಲ್ಲವೂ ನಿಮ್ಮ ಮೇಲೆ ಗುರಿಯಾಗಿವೆ ಎಂದು ಅಬ್ಬಾಸಿ ಬೆದರಿಕೆ ಹಾಕಿದ್ದಾರೆ.

ಪಾಕಿಸ್ತಾನ ಸೇನೆಯು ಅಗತ್ಯವಿದ್ದಾಗ ರೈಲ್ವೆಯನ್ನು ಬಳಸಬಹುದು ಎಂದು ಇದೇ ಸಂದರ್ಭದಲ್ಲಿ ಹನೀಫ್ ಘೋಷಿಸಿದರು. ಪಾಕಿಸ್ತಾನ ರೈಲ್ವೆ ಯಾವಾಗಲೂ ಸೈನ್ಯಕ್ಕೆ ಸಹಾಯ ಮಾಡಲು ಸಿದ್ಧವಾಗಿದೆ ಎಂದರು.

ಅಂದಹಾಗೆ ಹನೀಫ್ ಅಬ್ಬಾಸಿ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ನಾಯಕ. ಅವರು ಜಮಾತ್-ಇ-ಇಸ್ಲಾಮಿ ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 2008 ರಲ್ಲಿ ಪಿಎಂಎಲ್-ಎನ್ ಸೇರಿದರು. 2012, ಜೂನ್​ ತಿಂಗಳಲ್ಲಿ 500 ಕೆಜಿ ಎಫೆಡ್ರಿನ್ ಮಾದಕ ದ್ರವ್ಯಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಅಬ್ಬಾಸಿ ವಿರುದ್ಧ ಎಫ್ಐಆರ್ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net