*ಕರೊನಾ ವೇಳೆ ಸಣ್ಣ ಪ್ರಮಾಣದಲ್ಲಿ ಶುರುವಾದ ಉದ್ಯಮ
*ಮೀನುಮರಿ ಸಾಕಣೆಯಿಂದ ದಿನದಾದಾಯ
ಚೇತನ್ ಚಕ್ಕೆರೆ ಬಿಡದಿ
ಕಡಿಮೆ ಬಂಡವಾಳ, ಹೆಚ್ಚು ಲಾಭ, ಕಡಿಮೆ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಹೆಚ್ಚಿನ ಆದಾಯ ಪಡೆದುಕೊಳ್ಳಬಹುದಾದ ವೃತ್ತಿ ಯಾವುದಾದರೂ ಇದ್ದರೆ ಅದು ಮೀನು ಸಾಕಣೆ. ಅದೇ ರೀತಿ ಇಲ್ಲೊಬ್ಬರು ವೈಜ್ಞಾನಿಕವಾಗಿ ಮೀನು ಸಾಕಣೆ ಮಾಡಿ ಆದಾಯ ಕಾಣುತ್ತಿದ್ದಾರೆ.
ಹೌದು.. ತಾಲೂಕಿನ ಹುಚ್ಚಮ್ಮನದೊಡ್ಡಿ ನಿವಾಸಿ ಜಗದೀಶ್ ಎಂಬುವವರು ಮೀನು ಸಾಕಣೆ ಮಾಡಿ ಲಾಭ ಕಂಡುಕೊಂಡಿದ್ದಾರೆ. ಇವರು 2020ರಲ್ಲಿ ಮೀನು ಸಾಕಣೆಗೆ ಮನಸ್ಸು ಮಾಡಿದ್ದರು. ಜಗದೀಶ್ ಸೋಲಾರ್ ಇಂಡಸ್ಟ್ರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ಕೈ ತುಂಬಾ ಸಂಬಳ ಬರುತ್ತಿದ್ದರೂ ಮೀನು ಸಾಕಣೆ ಮಾಡಬೇಕೆಂದು ನಿರ್ಧರಿಸುದ್ದು, ಕೋವಿಡ್ ಸಮಯದಲ್ಲಿ. ಜೆ.ಕೆ.ಅಕ್ವಾ ಫಾರ್ಮ್ ಹೆಸರಿನಲ್ಲಿ ಮೀನು ಹಾಗೂ ಮೀನುಮರಿಗಳ ಪಾಲನಾ ಕೇಂದ್ರವನ್ನು ತೆರೆದು ಉದ್ಯಮ ಶುರು ಮಾಡಿದರು.
ಉದ್ಯಮದತ್ತ ಒಲವು: ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ, ಹಾಗಾಗಿ ಏನನ್ನಾದರೂ ಮಾಡಬೇಕೆಂದು ಆಲೋಚಿಸಿ, ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದರು. ತಮ್ಮ ಜಮೀನಿನ ತಗ್ಗಾದ ಪ್ರದೇಶದಲ್ಲಿ ತೊಟ್ಟಿಗಳನ್ನು ನಿರ್ಮಾಣ ಮಾಡಿ, ಮೀನು ಸಾಕಣೆ ಆರಂಭಿಸಿದರು. ಮೀನಿನ ಮರಿಗಳನ್ನು ಬೇರೆ ಕಡೆಯಿಂದ ತಂದು ತೊಟ್ಟಿಗೆ ಬಿಟ್ಟು ಒಂದು ವರ್ಷದವರೆಗೆ ಸಾಕಣೆ ಮಾಡಿ, ಮಾರಾಟ ಮಾಡಿದರು. ಬಂದ ಹಣ ಹಾಗೂ ಸಾಕಣೆ ವೆಚ್ಚ ಲೆಕ್ಕಾಚಾರ ಮಾಡಿ ನೋಡಿದಾಗ ಉತ್ತಮ ಲಾಭ ಬಂದಿದ್ದನ್ನು ಕಂಡುಕೊಂಡರು.
ಬಳಿಕ ಈ ಉದ್ಯಮವನ್ನೇ ದೊಡ್ಡಮಟ್ಟದಲ್ಲಿ ಮಾಡಲು ಜಗದೀಶ್ ನಿರ್ಧಾರ ಮಾಡಿದರು. ಮೀನುಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕ ಮಾಡಿ, ಮೀನು ಕೃಷಿಯ ಬಗ್ಗೆ ಹೆಚ್ಚು ಮಾಹಿತಿ ಪಡೆದು, ಇಲಾಖೆಯಿಂದ 50 ಲಕ್ಷ ರೂ. ಸಬ್ಸಿಡಿ ದರದಲ್ಲಿ ಪಡೆದು, 3 ಎಕರೆ ಪ್ರದೇಶದಲ್ಲಿ ಮೀನು ಸಾಕಣೆ ಕೃಷಿ ಆರಂಭಿಸಿದ್ದಾರೆ.
ಜಗದೀಶ್ ಅವರು ಮೊದಲು ವರ್ಷಕ್ಕೊಮ್ಮೆ ಇಳುವರಿ ಬರುವ ಮೀನುಗಳನ್ನು ಸಾಕಿದ್ದರು. ಇದಾದ ನಂತರ ಮೀನು ಮರಿಗಳನ್ನು ಸಾಕಣೆ ಮಾಡಿ ಮಾರಾಟ ಮಾಡಲು ಪ್ರಾರಂಭಿಸಿದಾಗ ತಿಂಗಳಿಗೊಮ್ಮೆ ಆದಾಯ ಕಾಣುತ್ತಿದ್ದಾರೆ. ಈಗ ಅಲಂಕಾರಿಕ ಮೀನುಗಳನ್ನು ಸಾಕಣೆ ಮಾಡುತ್ತಿರುವ ಹಿನ್ನೆಲೆಯಿಂದಾಗಿ ವಾರಕ್ಕೊಮ್ಮೆ, ದಿನಕ್ಕೊಂದು ಆದಾಯದ ದಾರಿಯಾಗಿದೆ.
ಜಗದೀಶ್ ಅವರು ಮೀನುಮರಿಗಳನ್ನು ಬೇರೆ ಸಾಕಣೆ ಕೇಂದ್ರದಿಂದ ತಂದು ಮಾರಾಟ ಮಾಡುತ್ತಿದ್ದರು. ಇದರ ಬದಲು ತಾವೇ ಮರಿಗಳ ಸಾಕಣೆ ಮಾಡಿ ಮಾರುವ ಸಂಕಲ್ಪ ಮಾಡಿ, ಮರಿಗಳ ಉತ್ಪಾದನೆಯತ್ತ ಹೆಚ್ಚು ಒತ್ತು ನೀಡಿದರು. ಅದಕ್ಕೆ ಬೇಕಾದ ನಿರ್ದಿಷ್ಟ ಜಾಗ ಹಾಗೂ ಸಲಕರಣೆ ತಂದು ಮರಿಗಳ ಉತ್ಪಾದನೆ ಮಾಡಿ, ಮಾರುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳೊಂದಿಗೆ ಜಗದೀಶ್ ನಿರಂತರ ಸಂಪರ್ಕ ಹೊಂದಿದ್ದಾರೆ. ಗ್ರಾಪಂಗಳ ಮೂಲಕ ಆಯಾಯ ಗ್ರಾಮಗಳ ವ್ಯಾಪ್ತಿಯ ಕೆರೆಗಳಲ್ಲಿ ಮೀನು ಸಾಕಣೆ ಮಾಡಲು ಹರಾಜು ಮಾಡಲಾಗುತ್ತದೆ. ಹರಾಜು ಪಡೆದುಕೊಂಡವರು ಇವರ ಬಳಿಯೇ ಉತ್ತಮ ತಳಿಯ ಮರಿಗಳನ್ನು ಕೊಂಡು ಹೋಗುತ್ತಿದ್ದಾರೆ.
ಜಗದೀಶ್ ಸ್ವಂತ ಬೋರ್‌ವೆಲ್ ಗಳನ್ನು ಹೊಂದಿದ್ದು, ಇದರಿಂದ ತೊಟ್ಟಿಗಳಿಗೆ, ಕೃಷಿ ಹೊಂಡಗಳಿಗೆ ನೀರು ತುಂಬಿಸಿಕೊಳ್ಳುತ್ತಾರೆ. ಬೋರ್‌ವೆಲ್ ಗೆ ಇವರು ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯದೆ ಪೂರ್ಣ ಪ್ರಮಾಣದಲ್ಲಿ ಸೋಲಾರ್ ಮೊರೆ ಹೋಗಿದ್ದಾರೆ. ಬೋರ್‌ವೆಲ್‌ಗಳು, ಲೈಟ್‌ಗಳು ಸೋಲಾರ್‌ನಿಂದಲೇ ಕೆಲಸ ಮಾಡುತ್ತವೆ.
ಜಗದೀಶ್ ಅವರು ಕಾಟ್ಲಾ, ರೋಹು, ಕಮಲ್ ಕಾರ್ಪ್, ರೂಪ್ ಚಂದ್ ತಳಿಗಳ ಮರಿಗಳನ್ನು ಸಾಕಣೆ ಮಾಡಿ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಈ ನಾಲ್ಕು ಮೀನಿನ ತಳಿಗಳು ಉತ್ತಮವಾಗಿದ್ದು, ಬೇಗ ದಪ್ಪವಾಗಿ ಸಾಕಣೆ ಮಾಡುವ ರೈತರ ಆದಾಯ ಹೆಚ್ಚಿಸುತ್ತದೆ. ನೇರ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಪರಿಚಿತರೆಲ್ಲರೂ ನೇರವಾಗಿ ಬಂದು ಮೀನು ಮರಿಗಳನ್ನು ಪಡೆದುಕೊಳ್ಳುತ್ತಾರೆ. ಅದೇರೀತಿ ದಪ್ಪನೆಯ ಮೀನುಗಳನ್ನೂ ಸಾಕಣೆ ಮಾಡಿ ಮಾರಾಟ ಮಾಡುತ್ತಾರೆ.
ಮೀನು ಮರಿಗಳ ಸಾಕಣೆ ಜತೆಗೆ ಮನೆಗಳಲ್ಲಿ ಅಲಂಕಾರಿಕವಾಗಿ ಇಡುವ ಅಕ್ವೇರಿಯಂ ಮೀನಿನ ಮರಿಗಳನ್ನೂ ಇವರು ಸಾಕಣೆ ಮಾಡುತ್ತಿದ್ದಾರೆ. ಸಿಮೆಂಟ್ ತೊಟ್ಟಿಗಳನ್ನು ನಿರ್ಮಾಣ ಮಾಡಿ, ಅದರಲ್ಲಿ 4-5 ಬಗೆಯ ಅಲಂಕಾರಿಕ ಮೀನುಗಳನ್ನು ಸಾಕಣೆ ಮಾಡುತ್ತಿದ್ದಾರೆ.
ಬಾಕ್ಸ್ಸಂಪರ್ಕ ಸಂಖ್ಯೆ:6364787074‘ಭೇಟಿ ವೇಳೆ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೆ.ಪ್ರತಿಷ್ಠಿತ ಸೋಲಾರ್ ಕಂಪನಿಯಲ್ಲಿ ಪ್ರಮುಖ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕೋವಿಡ್ ಸಮಯದಲ್ಲಿ ಕೆಲಸ ಇಲ್ಲದೆ ಮನೆಯಲ್ಲೇ ಕುಳಿತಿದ್ದಾಗ ಮೀನು ಸಾಕಣೆ ಮಾಡುವ ಆಲೋಚನೆ ಮಾಡಿ ಮೊದಲಿಗೆ ಅಲ್ಪ ಪ್ರಮಾಣದಲ್ಲಿ ಸಾಕಣೆ ಮಾಡಿದೆ. ಈಗ ಅದು ಮೀನುಮರಿ, ಅಕ್ವೇರಿಯಂ ಮೀನುಗಳ ಸಾಕಣೆ ಹಾಗೂ ಮಾರಾಟ ಕೇಂದ್ರವನ್ನಾಗಿ ಮಾರ್ಪಾಡಾಗಿದೆ. ಮೀನು ಕೃಷಿ ನನಗೆ ಸಾಕಷ್ಟು ಲಾಭ ತಂದುಕೊಟ್ಟಿದೆ. ವೈಜ್ಞಾನಿಕವಾಗಿ ಸಾಕಾಣಿಕೆ ಮಾಡುವುದರಿಂದ ನಷ್ಟ ಎದುರಾಗುವುದಿಲ್ಲ. ಜಗದೀಶ್, ಮೀನು ಸಾಕಣೆದಾರ